ಕಳೆದ ಕೆಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆ, ಬೀಸಿದ ಬಲವಾದ ಗಾಳಿಗೆ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲಹಿತ್ತಿಲು, ಕೊರಕಟ್ಟ, ಸರ್ಕುಡೇಲು ವಿವಿಧ ಭಾಗದಲ್ಲಿ ದೊಡ್ಡ ಪ್ರಮಾಣದ ಹಾನಿಯಾಗಿದೆ.

ರಾತ್ರಿ ಸುಮಾರು 9.00ಗಂಟೆಗೆ ಬೀಸಿದ ಗಾಳಿಗೆ ಕೊರಕಟ್ಟ ಜಾರಪ್ಪ ಪೂಜಾರಿ, ಸರ್ಕುಡೇಲು ರಾಮ್ ದಾಸ್ ಪೂಜಾರಿ, ಚಂದ್ರಹಾಸ್ ಪೂಜಾರಿ ಸರ್ಕುಡೇಲು, ಕೊರಕಟ್ಟ ಆಲಿಕುಂಞಿ, ಮೋರ್ಲಹಿತ್ತಿಲು ಅಬ್ಬಾಸ್, ಮೋರ್ಲಹಿತ್ತಿಲು ಹನೀಫ್, ಮೋರ್ಲ ಕಂಬಳಕೋಡಿ ಅನ್ಸಾರ್, ಕೊರಕಟ್ಟ ಶೇಖಬ್ಬ, ಮಹಮ್ಮದ್ ಕೊರಕಟ್ಟ ಹಾಗೂ ಪೊಟ್ಟೊಳಿಕೆಯ ಒಂದು ಮನೆಗೆ ಹಾಗೂ ಶಾಂತಿಪಳಿಕೆ ದಿ. ಗುಲಾಬಿ ಅವರ ಪುತ್ರ ಚಂದ್ರಹಾಸ್ ಶಾಂತಿಪಳಿಕೆ ಅವರ ಮನೆಗೆ ಭಾರೀ ಪ್ರಮಾಣದ ಹಾನಿಯಾಗಿದ್ದು ಲಕ್ಷಾಂತರ ರೂ. ನಷ್ಟವಾಗಿದೆ. ರಾತ್ರಿಯ ಗಾಳಿ ಮಳೆಗೆ ಈ ರೀತಿ ಅವಾಂತರ ನಡೆದಿದ್ದರೂ ಅದೃಷ್ಟವಶಾತ್ ಗಾಯ ನೋವಾದ ಘಟನೆ ಸಂಭವಿಸಿಲ್ಲ.
ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರದ ಶಾಸಕ, ಕರ್ನಾಟಕ ವಿಧಾನಸಭಾ ಅಧ್ಯಕ್ಷರ ಯು.ಟಿ ಖಾದರ್ ಅವರು ಭೇಟಿ ನೀಡಿ ಅಗತ್ಯ ಕ್ರಮಕ್ಕೆ ತಹಶೀಲ್ದಾರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿ ವಿಶೇಷ ಸಭೆ ಕರೆದರು.
ರಸ್ತೆಯುದ್ದಕ್ಕೂ ಧರೆಗುರುಳಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು ಸ್ಥಳೀಯರು, ಪಂಚಾಯಿತಿ ಪ್ರತಿನಿಧಿಗಳು ಸಹಕರಿಸಿದರು.ಉಳ್ಳಾಲ್ ತಾಲೂಕು ತಹಶೀಲ್ದಾರ್ ಪುಟ್ಟರಾಜು ಮಾಹಿತಿ ಪಡೆದರು.ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ನವಾಝ್ ನರಿಂಗಾನ, ಪಿಡಿಒ ರಜನಿ ಡಿ. ಗಟ್ಟಿ, ಸದಸ್ಯರುಗಳಾದ ಶೇಖಬ್ಬ ನಿಡ್ಮಾಡ್, ಸಲೀಂ ಪೊಟ್ಟೊಳಿಕೆ, ಮುರಲೀಧರ ಶೆಟ್ಟಿ ಮೋರ್ಲ, ಸುಂದರ ಪೂಜರಿ ಕೋಡಿಮಜಲು ಮೋರ್ಲ, ಲತೀಫ್ ಕಾಪಿಕಾಡ್ ಶಾಸಕರ ಜೊತೆ ಚರ್ಚಿಸಿದರು.



