ಬೆಳಗಾವಿ: ಘಟಪ್ರಭಾ ನದಿಯಲ್ಲಿ ಇಬ್ಬರು ಸಂಬಂಧಿಕರು ಕೊಚ್ಚಿ ಹೋಗಿರುವ ಘಟನೆ ಮೂಡಲಗಿ ತಾಲೂಕಿನ ಅವರಾದಿ ಬಳಿ ಇಂದು ಮಧ್ಯಾಹ್ನ ನಡೆದಿದೆ. ಅವರಾದಿ ಬ್ರಿಡ್ಜ್ ಮೇಲೆ ನಿಯಂತ್ರಣ ತಪ್ಪಿ ಘಟಪ್ರಭಾ ನದಿಗೆ ಬೈಕ್ ಬಿದ್ದಿದ್ದು, ಅವರಾದಿ ಗ್ರಾಮದ ಚನ್ನಪ್ಪ ಹರಿಜನ(30), ದುರ್ಗವ್ವ ಹರಿಜನ(25) ಕೊಚ್ಚಿಹೋದ ಸಂಬಂಧಿಗಳು ಎಂದು ಗುರುತಿಸಲಾಗಿದೆ.
ಇಬ್ಬರು ವ್ಯಕ್ತಿಗಳು ಅವರಾದಿ ಗ್ರಾಮದಿಂದ ಮಹಾಲಿಂಗಪುರ ಪಟ್ಟಣಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ, ಅವರ ಪ್ರಯಾಣದ ವೇಳೆ ಸೇತುವೆ ಮೇಲೆ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಉರುಳಿದೆ. ಬ್ರಿಡ್ಜ್ ಬಳಿ ಬೈಕ್ ಪತ್ತೆಯಾಗಿದ್ದು, ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿರುವ ಹಿನ್ನೆಲೆ ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಹರಿವಾಗಿದ್ದು, ಸ್ಥಳಕ್ಕೆ ಎಸ್ಡಿಆರ್ಎಫ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ನದಿಯಲ್ಲಿ ಕೊಚ್ಚಿ ಹೋಗಿರುವ ಇಬ್ಬರಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



