ಒಕ್ಕಲಿಗ ಗೌಡ ಸೇವಾ ಸಂಘದ ಮಾತೃ ಸಮಿತಿ ಹಾಗೂ ಮಹಿಳಾ ಘಟಕ,ಯುವ ಘಟಕದ ಸಂಯುಕ್ತಾಶ್ರಯದಲ್ಲಿ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಶನಿವಾರ ನಡೆಯಿತು.

ಕಾರ್ಯಕ್ರಮದಲ್ಲಿ ಚೆಣ್ಣೆ ಮಣೆ ಆಟ, ವಿವಿಧ ತಿನಿಸುಗಳ ಸ್ಪರ್ಧೆ, ಸೋಬಾನೆ ಹಾಡು, ಅದೃಷ್ಟದ ಆಟಗಳನ್ನು ನಡೆಸಿ ತುಳುನಾಡ ಸಂಪ್ರದಾಯದ ಅನಾವರಣ ಮಾಡಲಾಯಿತು.
ಸಭಾ ಕಾರ್ಯಕ್ರಮ:
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಟಿ ಕೂಟದ ಬಗ್ಗೆ ಉಪನ್ಯಾಸ ನೀಡಿದ ಕಡಬ ಸರಸ್ವತೀ ವಿದ್ಯಾಲಯದ ಶಿಕ್ಷಕಿ ಪ್ರೇಮಲತಾ ಕೇಪುಂಜ ತುಳುನಾಡು ಸಂಸ್ಕೃತಿಯ ನೆಲೆವೆಡು, ಇಲ್ಲಿನ ಆಚಣೆಗಳು ನಮ್ಮ ಜೀವನ ಪದ್ದತಿಯಲ್ಲಿ ಹಾಸುಹೊಕ್ಕಾಗಿದ್ದು ವೈಜ್ಞಾನಿಕ ತಳಹದಿಯಲ್ಲಿ ಆಚರಿಸಲ್ಪಡುತ್ತಿದೆ, ಆಟಿ ಆಚರಣೆ ಕಷ್ಟದ ದಿನಗಳನ್ನು ನೆನೆಯುವುದು ಮಾತ್ರವಲ್ಲ ಅದನ್ನು ಖಷಿಯಿಂದ ಅನುಭವಿಸಬೇಕು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಮಾತನಾಡಿ ನಾವು ಸಂಘಟಿತರಾಗಿ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿಕೊಂಡು ಮುಂದಿನ ಜನಾಂಗಕ್ಕೆ ಪರಿಚಯಿಸುವ ಕೆಲಸ ಮಾಡಬೆಕು , ನಮ್ಮ ಸಂಘದ ವತಿಯಿಂದ ಹೊಸಮಠದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಮುದಾಯ ಭವನದ ಕಾಮಗಾರಿಯನ್ನು ಶೀಘ್ರ ಮುಗಿಸಿಕೊಡುವಲ್ಲಿ ಸಮುದಾಯದ ಬಂಧುಗಳು ಆರ್ಥಿಕ ಸಹಕಾರ ನೀಡಬೇಕು ಎಂದರು.
ಕಡಬ ಸ್ಪಂದನಾ ಸಮುದಾಯ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಅಮೈ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ, ತಾಲೂಕು ಯುವ ಘಟಕದ ಅಧ್ಯಕ್ಷ ಪೂರ್ಣೇಶ್ ಗೌಡ ಬಾಬ್ಲುಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕೊಲ್ಲೆಸಾಗು ಸ್ವಾಗತಿಸಿದರು. ಸಂಘಟನ ಕಾರ್ಯದರ್ಶಿ ಶಾರದಾ ಕೇಶವ ಪ್ರಸ್ತಾವನೆಗೈದರು. ಕಾರ್ಯದರ್ಶಿ ಲಾವಣ್ಯ ಹೇಮಂತ್ ವಂದಿಸಿದರು. ವೇದಾ ಶಿವರಾಮ್ ಏನೆಕಲ್ ಹಾಗೂ ರೇವತಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.



