ಬಸ್ ನಿಲುಗಡೆಗೊಳಿಸಿ ಮನೆಗೆ ಹೋಗುತ್ತಿದ್ದ ನಿರ್ವಾಹಕನ ಪರ್ಸ್ ಅನ್ನು ದರೋಡೆ ನಡೆಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳದಲ್ಲಿ ಸೋಮವಾರ ತಡರಾತ್ರಿ ನಡೆದಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರೇಕಳ ಪಂಚಾಯಿತಿ ಬಳಿಯ ನಿವಾಸಿ, ಸ್ಟೇಟ್ ಬ್ಯಾಂಕ್ ಪಾವೂರು ಮಧ್ಯೆ ಚಲಿಸುವ ೫೫ ನಂಬರಿನ ಶ್ರೀ ಕಟೀಲ್ ಬಸ್ ನಿರ್ವಾಹಕ ಮಹಮ್ಮದ್ ಇಕ್ಬಾಲ್ ಎಂಬವರ ದರೋಡೆ ನಡೆದಿದೆ. ಆ.೫ ರ ಸಂಜೆ ಹರೇಕಳ ಡಿವೈ ಎಫ್ ಐ ಕಚೇರಿ ಸಮೀಪ ಜಾಗದಲ್ಲಿ ಬಸ್ಸನ್ನು ನಿಲ್ಲಿಸಲು ಬಂದ ಸಂದರ್ಭ ನಿರ್ವಾಹಕ ಇಕ್ಬಾಲ್ ಮುಂಚಿತವಾಗಿ ಇಳಿದು ಸ್ಥಳೀಯ ಅಂಗಡಿಗೆ ತೆರಳಿದ್ದರು. ಅಲ್ಲಿ ಮನೆಗೆ ಸಾಮಗ್ರಿ ಖರೀದಿಸಿ ಸಮೀಪದಲ್ಲೇ ಇರುವ ಮನೆಗೆ ಮೊಬೈಲ್ ಟಾರ್ಚ್ ಹಾಕಿಕೊಂಡು ನಡೆದುಕೊಂಡು ಹೋಗುವ ಸಂದರ್ಭ ಹಿಂದಿನಿಂದ ಬಂದ ಇಬ್ಬರು ಆಗಂತುಕರು ಕೈಗಳನ್ನು ಹಿಡಿದು, ಬಟ್ಟೆಯನ್ನು ಬಾಯಿಗೆ ತುರುಕಿ ಕೈಯ್ಯಲ್ಲಿದ್ದ ಅಂದು ದುಡಿಮೆ ನಡೆಸಿದ್ದ ರೂ.೧೩,೦೦೦ ದಷ್ಟು ನಗದು ಇದ್ದ ಪರ್ಸನ್ನು ಕಳವು ನಡೆದಿದ್ದಾರೆ. ನಿರ್ವಾಹಕ ಇಕ್ಬಾಲ್ ಬೊಬ್ಬೆ ಕೇಳಿ ಸ್ಥಳೀಯರು ಹಾಗೂ ಕುಟುಂಬದವರು ಓಡಿಬಂದು , ನಾಟೆಕಲ್ ಕಣಚೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳ್ಳರು ತಲೆಮರೆಸಿಕೊಂಡಿದ್ದಾರೆ. ಬಸ್ಸಿನಲ್ಲಿ ಇಬ್ಬರು ಯುವಕರು ನಿರ್ವಾಹಕನ ಜೊತೆ ವಾಗ್ವಾದಕ್ಕಿಳಿದಿದ್ದು, ಅದೇ ತಂಡ ಕೃತ್ಯ ಎಸಗಿರುವ ಸಾಧ್ಯತೆಯ ಮೇರೆಗೆ ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ



