ಕಠ್ಮಂಡು: ನೇಪಾಳದ ಸೋಲುಖುಂಬು ನಿಂದ ಕಠ್ಮಂಡುವಿಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಇಂದು ಬೆಳಗ್ಗೆ 10 ಗಂಟೆಗೆ ಸುಮಾರಿಗೆ ನಾಪತ್ತೆಯಾಗಿದ್ದು, ಇದೀಗ ಇದರ ಅವಶೇಷಗಳು ಗುಡ್ಡಗಾಡು ಪ್ರದೇಶದಲ್ಲಿ ಪತ್ತೆಯಾಗಿದೆ. ನೇಪಾಳದ ಮೌಂಟ್ ಎವರೆಸ್ಟ್ ಬಳಿ ಇಂದು ಬೆಳಗ್ಗೆ ನಾಪತ್ತೆಯಾಗಿದ್ದ ಆರು ಜನರಿದ್ದ ಖಾಸಗಿ ಹೆಲಿಕಾಪ್ಟರ್ ಪತನಗೊಂಡಿದ್ದು ಹೆಲಿಕಾಪ್ಟರ್ ನ ಅವಶೇಷಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹೆಲಿಕಾಪ್ಟರ್ ನಲ್ಲಿ ಐದು ಮಂದಿ ವಿದೇಶಿಯರೂ ಸೇರಿದಂತೆ ಒಟ್ಟು ಆರು ಮಂದಿ ಇದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ರಕ್ಷಣಾ ತಂಡವು ಅಪಘಾತದ ಸ್ಥಳದಿಂದ ಐದು ಮೃತದೇಹಗಳನ್ನು ಹೊರತೆಗೆದಿದೆ.

ಖಾಸಗಿ ಹೆಲಿಕಾಪ್ಟರ್ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಪರ್ವತ ಪ್ರದೇಶವಾದ ಸೊಲುಖುಂಬು ಜಿಲ್ಲೆಯ ಲಂಜುರಾದಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಲಿಕಾಪ್ಟರ್ ಬೆಟ್ಟದ ಮೇಲಿರುವ ಮರಕ್ಕೆ ಡಿಕ್ಕಿ ಹೊಡೆದಿದ್ದು, ಇದು ಪತನಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಮನಂಗ್ ಏರ್ ಫ್ಲೀಟ್ ನ ಒಂದು ಭಾಗವಾದ ಹೆಲಿಕಾಪ್ಟರ್ ಸೊಲುಖುಂಬು ಜಿಲ್ಲೆಯ ಸುರ್ಕಿಯಿಂದ ಬೆಳಿಗ್ಗೆ 9.45 ಕ್ಕೆ ರಾಜಧಾನಿ ಕಠ್ಮಂಡುವಿಗೆ ಹೊರಟಿತು ಹಾಗೂ 15 ನಿಮಿಷಗಳಲ್ಲಿ ತನ್ನ ಸಂಪರ್ಕವನ್ನು ಕಳೆದುಕೊಂಡಿತು ಎಂದು ದಿ ಕಠ್ಮಂಡು ಪೋಸ್ಟ್ ನಲ್ಲಿ ವರದಿ ಮಾಡಿದೆ.



