ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಚಿಕ್ಕೋಡಿ ತಾಲೂಕಿನ ಹೀರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಾರಾಯಣ ಮಾಳಿಗೆ ಪಾಪಪ್ರಜ್ಞೆ ಕಾಡಿದ್ದು, “ನಂದು ತಪ್ಪಾಯ್ತು ನೀವೇ ನನ್ನ ಗುಂಡು ಹಾರಿಸಿ ಸಾಯಿಸಿ, ಇಲ್ಲ ನಾನೇ ಆತ್ಮಹತ್ಯೆ ಮಾಡಿಕೊಳ್ಳುವೆ” ಎಂದು ಹೇಳಿರುವುದಾಗಿ ವರದಿಗಳಾಗಿವೆ. ಪ್ರಕರಣದ ಪ್ರಮುಖ ಆರೋಪಿಗಳಾದ ನಾರಾಯಣ ಮಾಳಿ ಮತ್ತು ಹಸನ್ ದಲಾಯತ್ ರನ್ನು ಪೊಲೀಸರು ಜು.17ರ ವರೆಗೆ ಕಸ್ಟಡಿಗೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿ ನಾರಾಯಣ ಮಾಳಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದು, ಈ ರೀತಿ ನುಡಿದಿದ್ದಾನೆ ಎನ್ನಲಾಗಿದೆ. ಇಬ್ಬರು ಆರೋಪಿಗಳನ್ನೂ ಪೊಲೀಸರು ಪ್ರತ್ಯೇಕ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಜೈನ ಮುನಿಗಳ ಪರ್ಸನಲ್ ಡೈರಿಯನ್ನು ಸುಟ್ಟು ಹಾಕಿರುವುದಾಗಿಯೂ ಮಾಳಿ ಹೇಳಿದ್ದಾನೆ. ಆದರೆ, ಆ ಡೈರಿಯಲ್ಲಿ ಏನಿತ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ಈ ನಡುವೆ ನಾರಾಯಣ ಮಾಳಿ ಮನೆಗೆ ಪೊಲೀಸರು ಭಾರೀ ಭದ್ರತೆ ನೀಡಿದ್ದಾರೆ. 20ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಕುಟುಂಬಸ್ಥ ರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಮನೆಯಲ್ಲಿರುವ 30ಕ್ಕೂ ಹೆಚ್ಚು ಜಾನುವಾರುಗಳಿಗೆ ಆರೈಕೆ ಮಾಡುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.



