ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದ್ದು, ಇದರ ಬೆನ್ನಲ್ಲೇ ಸಿಎಂ ರಾಜೀನಾಮೆಗೆ ಒತ್ತಡ ಹೆಚ್ಚಾಗಿದೆ. ಇದರ ಮಧ್ಯ ಇದೀಗ ಸಿದ್ದರಾಮಯ್ಯಗೆ ಜಾರಿ ನಿರ್ದೇಶನಾಲಯ (ಇಡಿ) ಸಂಕಷ್ಟ ಎದುರಾಗಿದೆ.
ಇಂದು (ಸೆಪ್ಟೆಂಬರ್ 30) ಬೆಂಗಳೂರಿನ ಇಡಿ ಕಚೇರಿಯಲ್ಲಿ ಸ್ನೇಹಮಯಿ ಕೃಷ್ಣ ದೂರು ದಾಖಲಿಸಿದ್ದು, ಈ ದೂರಿನ ಮೇರೆಗೆ ಸಿಎಂ ವಿರುದ್ಧ ಯಾವುದೇ ಸಂದರ್ಭದಲ್ಲಿ ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ. ಒಂದು ವೇಳೆ ಇಡಿಯಲ್ಲೂ ಎಫ್ಐಆರ್ ದಾಖಲಾದರೆ, ಸಿದ್ದರಾಮಯ್ಯಗೆ ಡಬಲ್ ಸಂಕಷ್ಟ ಎದುರಾದಂತಾಗುತ್ತದೆ.

ಮುಡಾ ಕೇಸ್ ದೂರುದಾರ ಸ್ನೇಹಮಯಿ ಕೃಷ್ಣ ಅವರು ಇಂದು ತಮ್ಮವರ ಮೂಲಕ ಇಡಿ ಕಚೇರಿಗೆ ದೂರು ತಲುಪಿಸಿದ್ದು, ಇದೀಗ ಇಡಿ ಅಧಿಕಾರಿಗಳು ದೂರು ದಾಖಲಿಸಿಕೊಂಡು ಸ್ವೀಕೃತಿ ಪತ್ರ ಸಹ ನೀಡಿದ್ದಾರೆ. ಹೀಗಾಗಿ ಯಾವುದೇ ಸಮಯದಲ್ಲೂ ಸಹ ಸಿಎಂ ವಿರುದ್ಧ ಇಡಿ ಅಧಿಕಾರಿಗಳು ಎಫ್ಐಆರ್ ದಾಖಲಿಸಲಿದ್ದಾರೆ.
ಲೋಕಾಯುಕ್ತ ತನಿಖೆ ಜೊತೆಗೆ ಸಿಎಂ ಸಿದ್ದರಾಮಯ್ಯ ಜೊತೆಗೆ ಡಬಲ್ ಟೆನ್ಷನ್ ಶುರುವಾಗಿದೆ. ಒಂದ್ಕಡೆ ಸಿಬಿಐ ತನಿಖೆಗೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಮೊರೆ ಹೋಗಿದ್ದಾರೆ. ಲೋಕಾಯುಕ್ತ ರಾಜ್ಯ ಸರ್ಕಾರದ ಅಧೀನದಲ್ಲಿ ನಡೆಯುವ ಸಂಸ್ಥೆಯಾಗಿದೆ. ಹೀಗಾಗಿ ಪಾರದರ್ಶಕ ತನಿಖೆಯಾಗ್ಬೇಕು ಅಂದ್ರೆ ಸಿಬಿಐಗೆ ಕೊಡಿ ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ದಸರಾ ರಜೆ ಬಳಿಕ ಈ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಗಳಿವೆ. ಮತ್ತೊಂದಡೆ ಇದೀಗ ಇಡಿ ಅಧಿಕಾರಿಗಳಿಗೂ ದೂರು ನೀಡಿದ್ದಾರೆ.



