ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2024 ಕ್ಕೆ ಚಾಮುಂಡಿ ಬೆಟ್ಟದಲ್ಲಿ ಗುರುವಾರ ಬೆಳಗ್ಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ನಗರದ ಚಾಮುಂಡಿ ಬೆಟ್ಟದಲ್ಲಿ ಹಾಕಲಾಗಿರುವ ಬೃಹತ್ ವೇದಿಕೆಯಲ್ಲಿ ಬೆಳಗ್ಗೆ 09:15ರಿಂದ 09.45ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಶ್ರೀಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ನಾಡೋಜ, ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ನವರಾತ್ರಿ ಉತ್ಸವವನ್ನು ಉದ್ಘಾಟಿಸಿದರು.

ಇದಕ್ಕೂ ಮೊದಲು ದಟ್ಟ ಮಂಜು ಕವಿದ ವಾತಾವರಣದಲ್ಲಿ ನಾಡೋಜ ಹಂ.ಪ.ನಾಗರಾಜಯ್ಯರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಡೊಳ್ಳು, ವಾದ್ಯ ಸೇರಿದಂತೆ ಕಲಾ ಮೇಳಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಹಂ.ಪ.ನಾ ಬುಧವಾರ ರಾತ್ರಿಯೇ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಅವರನ್ನು ಗುರುವಾರ ಬೆಳಗ್ಗೆ ಪೊಲೀಸ್ ಬೆಂಗಾವಲಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬರಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳು ಮೈಸೂರಿನಿಂದ ಕೆಎಸ್ಸಾರ್ಟಿಸಿ ಐರಾವತ ಬಸ್ ನಲ್ಲಿ ಆಗಮಿಸಿದರು. ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ತಂಡಕ್ಕೂ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದಿಂದ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.
ನಂತರ ನಾಡೋಜ ಹಂ.ಪ.ನಾಗರಾಜಯ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳು ಶ್ರೀಚಾಮುಂಡೇಶ್ವರಿ ದರ್ಶನ ಪಡೆದರು. ದೇವಾಲಯದ ವತಿಯಿಂದ ಹಂ.ಪ.ನಾಗರಾಜಯ್ಯ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರಿಗೂ ಶಾಲು ಹಾರ, ಕುಂಕುಮ ಹಾಕಿ ಫಲ ತಾಂಬೂಲ ನೀಡಲಾಯಿತು.



