ತಾಯಿಯ ಬೆಚ್ಚಗಿನ ಅಪ್ಪುಗೆಯನ್ನು ಬಿಡಿಸಿಕೊಂಡು ತಪ್ಪು ಹೆಜ್ಜೆಗಳನ್ನು ಸರಿಪಡಿಸಿಕೊಂಡು ಮಗುವೊಂದು ಮನೆಯಿಂದ ಶಾಲೆಗೆ ಕಾಲಿಡುವಾಗ ಕಣ್ಣರಳಿಸಿ ನೋಡುವುದು ಮೊದಲು ಕರಿಹಲಗೆಯನ್ನು…!!ಚಾಕ್ ಪೀಸ್ ನಿಂದ ಬರೆಯುವ ಕುತೂಹಲ.. ಬರೆದುದನ್ನು ಅಳಿಸುವ ಕುತೂಹಲ…ಹುಟ್ಟುತ್ತಲೇ ಸ್ಮಾರ್ಟ್ ಫೋನ್ ನ ಮೇಲೆ ತೋರು ಬೆರಳಾಡಿಸುವ ಈಗಿನ ಮಕ್ಕಳಿಗೆ ಶಾಲೆಯೊಳಗೆ ಕಾಲಿಟ್ಟಾಗ ಕಾಣಸಿಗುವ ಗ್ರೀನ್ ಬೋರ್ಡ್, ಬ್ಲಾಕ್ ಬೋರ್ಡ್ ನ ಮೇಲೆ ಯಾವುದೇ ಕುತೂಹಲ ವಿರಲಾರದು…ಆದರೆ ಅದೇ ಕರಿಹಲಗೆಯ ಮೇಲೆ ನನಗೆ ಮಾತ್ರ ಬಹಳ ಕುತೂಹಲವಿತ್ತು…!!!

1997 -98 ರಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಕಾರ್ಕಳ ತಾಲೂಕು ಇಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿ ಪಿಯುಸಿ ವಿಜ್ಞಾನ ವಿಭಾಗದ ಒಳಗೆ ಕಾಲಿಟ್ಟಿದ್ದೆ .ಮೊದಲನೇ ದಿನ ಎರಡನೇ ಅವಧಿ ಕೆಮಿಸ್ಟ್ರಿ ತರಗತಿ …ಆದರ್ಶ ಗುರುವೊಬ್ಬ ಕೇವಲ ಕರಿಹಲಗೆಯ ಮೇಲೆ ಬರೆಯುವ ಸುಂದರ ಅಕ್ಷರಗಳಿಂದ ಒಂದು ಮಗುವಿನ ಮನಸ್ಸಿಗೆ ಎಷ್ಟು ಪ್ರಭಾವ ಬೀರಬಲ್ಲನೋ ಅವತ್ತೇ ನನಗೆ ಅರ್ಥವಾಗಿದ್ದು..!! ಒಂದು ಮಗುವಿಗೆ ಆ ಅಧ್ಯಾಪಕ ಇಷ್ಟವಾಗಬೇಕಾದರೆ ಕೇವಲ ತಮಾಷೆ ಮಾಡಿಕೊಂಡಿದ್ದರಾಗದು.ಆತನ ನಡೆ-ನುಡಿ ಗಾಂಭೀರ್ಯ ಮತ್ತು ವ್ಯಕ್ತಿತ್ವವೂ ಪ್ರಭಾವ ಬೀರುತ್ತದೆ. ನಾನು ಕಂಡ ಆ ಆದರ್ಶ ಗುರು ನನ್ನ ರಸಾಯನ ಶಾಸ್ತ್ರ ಪ್ರಾಧ್ಯಾಪಕರು .. ಶ್ರೀ ಜಯಾನಂದ ಸುವರ್ಣ ಸರ್ (ಪ್ರಸ್ತುತ ಸ.ಪ.ಪೂರ್ವ ಕಾಲೇಜು ನಾಲ್ಯಪದವು, ಶಕ್ತಿ ನಗರ, ಮಂಗಳೂರು ತಾಲೂಕು ಇಲ್ಲಿ ಪ್ರಾಂಶುಪಾಲರಾಗಿದ್ದಾರೆ)ಅವರ ರಸಾಯನ ಶಾಸ್ತ್ರ ತರಗತಿಯಲ್ಲಿ ಕುಳಿತುಕೊಳ್ಳುವುದೂ ಒಂದು ಸುಯೋಗ ವೇ ಸರಿ… ಕರಿಹಲಗೆಯ ಮೇಲೆ ಬರೆಯುವ ಸ್ಫುಟವಾದ , ಅಂದವಾದ ಅಕ್ಷರಗಳು.. ಸದಾ ಅವರ ಮುಖದ ಮಂದಹಾಸ.. ಅಳಿಸಲಾಗದ ಕಿರು ನಗು.. ಕೋಪವೇ ಬರದಿರುವ ವ್ಯಕ್ತಿತ್ವ ಇವೆಲ್ಲ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ್ದು ಮತ್ತೊಮ್ಮೆ ಆ ದಿನಗಳು ಮರುಕಳಿಸಬಾರದೇ ಎಂದುಕೊಳ್ಳುತ್ತೇನೆ. ಅವತ್ತಿನ ದಿನಗಳಲ್ಲಿ ಮೊಬೈಲ್ ಎಂಬ ಮಾಯಾಂಗನೆ ಇದ್ದಿದ್ದರೆ ಫೋಟೋ ತೆಗೆದುಕೊಳ್ಳಬಹುದಿತ್ತಾದರೂ ನಾನು ಮಾತ್ರ ನನ್ನ ಕಣ್ಣಗೊಂಬೆಯಲ್ಲಿ ಅಂದದ ಕರಿಹಲಗೆಯ ಮೇಲಿನ ಬಿಳಿದಾದ ಅಕ್ಷರಗಳ ಮಾಲೆಯ ಸ್ಕ್ರೀನ್ ಶಾಟ್ ಅನ್ನು ಸೆರೆ ಹಿಡಿದಿರುವೆ ಎಂದರೆ ತಪ್ಪೇನಿಲ್ಲ..!! ಅವರನ್ನೇ ಆದರ್ಶವಾಗಿಟ್ಟುಕೊಂಡು ಅಧ್ಯಾಪನದ ವೃತ್ತಿ ಜೀವನಕ್ಕೆ ಕಾಲಿಟ್ಟವಳು ನಾನು.. ಅಂತೆಯೇ 20೦7 ರಲ್ಲಿ ಪ್ರೌಢಶಾಲಾ ಗಣಿತ ಶಿಕ್ಷಕಿಯಾಗಿ ಸೇವೆ ಆರಂಭ ಮಾಡಿದ ನಂತರ ನನ್ನ ಗುರುಗಳನ್ನು ಹುಡುಕದ ಸೋಶಿಯಲ್ ಮೀಡಿಯಾಗಳಿಲ್ಲ ..ಸ್ವತಹ ನಾನು ಗುರು ಸ್ಥಾನದಲ್ಲಿದ್ದರೂ ನನ್ನ ಗುರುಗಳಿಗೆ ಒಂದು ಸಂದೇಶವನ್ನು ರವಾನಿಸಲೂ ಭಯವಾಗಿ ನಾನು ಸುಮ್ಮನಾಗುತ್ತಿದ್ದೆ. ಆದರೆ ಒಂದಲ್ಲ ಒಂದು ದಿನ ಅವರನ್ನು ಭೇಟಿಯಾಗಿ ಧನ್ಯವಾದಗಳನ್ನು ಸಲ್ಲಿಸಬೇಕೆಂಬ ಉತ್ಕಟ ಇಚ್ಛೆ ಇತ್ತು ಹೆಬ್ಬಯಕೆ ಇತ್ತು …!!
ಕರ್ನಾಟಕ ವಿಧಾನಸಭಾ ಚುನಾವಣೆ 2023 ಮೇ 10ನೇ ತಾರೀಕಿಗೆ ನಡೆಯಲಿದ್ದ ಕಾರಣ ಚುನಾವಣಾ ಕಾರ್ಯದಲ್ಲಿ ನಾನು ಪಾಲ್ಗೊಳ್ಳಬೇಕಾಗಿದ್ದರಿಂದ 9ನೇ ತಾರೀಖಿನಂದು ಬೆಳಗ್ಗೆ 9:00ಗೆ ಬಂಟ್ವಾಳದ ಇನ್ಫ್ಯಾಂಟ್ ಜೀಸಸ್ ಮೋಡಂಕಾಪು ಇಲ್ಲಿ ಕರ್ತವ್ಯಕ್ಕೆ ಹಾಜರಾಗಿ ನನ್ನ ಕೊಠಡಿ ಒಳಗೆ ಬಂದಾಗ ಪಕ್ಕದಲ್ಲಿ ಒಂದು ಸುಸ್ಪಷ್ಟ ಧ್ವನಿ ಕೇಳಿಸಿತು .ಎರಡು ವರ್ಷಗಳ ಕಾಲ ಸ್ಪಷ್ಟ ಇಂಗ್ಲಿಷ್ ನಲ್ಲಿ ರಸ್ತವತ್ತಾಗಿ ರಸಾಯನ ಶಾಸ್ತ್ರ ಬೋಧಿಸಿದ ಅದೇ ಧ್ವನಿ ಅದೇ ರಿ ಧಮಿಕ್ ವಾಯ್ಸ್.. ಅದೇ ಮ್ಯಾಜಿಕಲ್ ವಾಯ್ಸ್.. ಬರೋಬ್ಬರಿ 22 ವರ್ಷಗಳ ಬಳಿಕ ದೇವರೆ ಒದಗಿಸಿದಂತ ಸೌಭಾಗ್ಯ ..ಯಾರನ್ನು ಇಷ್ಟು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹುಡುಕುತ್ತಿದ್ದೆನೋ ಅದೇ ನನ್ನ ಗುರುಗಳು ಇಂದು ನನ್ನ ಕಣ್ಣೆದುರಲ್ಲಿ..ಶ್ರೀ ಜಯಾನಂದ ಸುವರ್ಣ ಸರ್ .ಭಯವೋ.. ಖುಷಿಯೋ ..ಅನಿರ್ವಚನೀಯ ಆನಂದದ ಅನುಭವ!! ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ ಬಹಳಷ್ಟು ಮಾತಾಡಿದೆ. ಅವರ ಸರಿ ಸಮಕ್ಕೆ ನಿಂತು ಫೋಟೋ ಕ್ಲಿಕ್ಕಿಸುವಾಗ ಭಯವಾಗುತ್ತಿತ್ತು. ಆದರೆ ಎಷ್ಟೋ ವರ್ಷಗಳ ಆಸೆ ಈಡೇರಿತ್ತು .
ನಾನಿಂದು ಗುರು ಸ್ಥಾನದಲ್ಲಿ ನಿಂತು ಪ್ರತಿ ನನ್ನ ತರಗತಿಯಲ್ಲಿ ಚಾಕ್ ಪೀಸ್ ಕೈಗೆತ್ತಿಕೊಂಡಾಗ ನೆಚ್ಚಿನ ಗುರುಗಳನ್ನು ನೆನೆಸಿಕೊಂಡು ಕರಿ ಹಲಗೆಯಲ್ಲಿ ಬರೆಯಲು ಶುರು ಮಾಡುತ್ತೇನೆ. ನಾನು ಬರೆಯುವ ಅಕ್ಷರಗಳು ಒಂದಷ್ಟು ಮಕ್ಕಳಿಗೆ ಪ್ರೇರಣೆಯಾಗಲಿ ಎಂಬುದು ನನ್ನ ಆಶಯ .ಮತ್ತೊಮ್ಮೆ ನನಗೆ ವಿದ್ಯಾರ್ಥಿನಿಯಾಗಿ ನನ್ನ ನೆಚ್ಚಿನ ಗುರುಗಳ ತರಗತಿಯಲ್ಲಿ ಕುಳಿತುಕೊಳ್ಳುವ ಹೆಬ್ಬಯಕೆಯ ಜೊತೆಗೆ… ಪ್ರತಿ ವಿದಾಯ ಮತ್ತೊಂದು ಭೇಟಿಗೆ ನಾಂದಿಯಾಗಲಿ ಎನ್ನುವ ಸದಾಶಯದೊಂದಿಗೆ………..…
ಶ್ರೀಮತಿ ಜ್ಯೋತಿ ಬೈಲೂರು
ಸಹಶಿಕ್ಷಕರು, ಸ.ಪ್ರೌ.ಶಾಲೆ ಕೊಯಿಲ
ಬಂಟ್ವಾಳ ತಾಲೂಕು,ದ.ಕ. 574211



