ಚೆನ್ನೈ: ತಿರುವಳ್ಳೂರಿನಲ್ಲಿ ಗೂಡ್ಸ್ ರೈಲಿಗೆ ಮೈಸೂರು ದರ್ಭಾಂಗ ಎಕ್ಸ್ ಪ್ರೆಸ್ ಡಿಕ್ಕಿಯಾಗಿ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. 12578 ಮೈಸೂರು-ದರ್ಭಾಂಗ ಬಾಗ್ಮತಿ ಎಕ್ಸ್‌ಪ್ರೆಸ್ ರೈಲು ಚೆನ್ನೈ-ಗುಡೂರು ವಿಭಾಗದಲ್ಲಿ ಚೆನ್ನೈ ಸೆಂಟ್ರಲ್‌ನಿಂದ 41 ಕಿಲೋಮೀಟರ್ ದೂರದಲ್ಲಿರುವ ಕವರೈಪೆಟ್ಟೈ ನಿಲ್ದಾಣದಲ್ಲಿ ನಿಂತಿದ್ದ ಸರಕು ರೈಲಿಗೆ ಹಿಂಭಾಗದಿಂದ ಡಿಕ್ಕಿ ಹೊಡೆದ ಪರಿಣಾಮ ಆದರಲ್ಲಿದ್ದ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಇದರಿಂದಾಗಿ ಬಾಗಮತಿ ಎಕ್ಸ್‌ಪ್ರೆಸ್‌ನ 12 ಬೋಗಿಗಳು ಹಳಿತಪ್ಪಿವೆ.
ಮೈಸೂರು ದರ್ಭಾಂಗ ಎಕ್ಸ್ ಪ್ರೆಸ್ ರೈಲನ್ನು ಬಾಗ್ಮತಿ ಎಕ್ಸ್‌ಪ್ರೆಸ್ ಎಂದು ಕರೆಯಲಾಗುತ್ತದೆ. ಅಪಘಾತದಿಂದಾಗಿ ಚೆನ್ನೈ-ಗುಡೂರು ವಿಭಾಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. ಹಳಿತಪ್ಪಿದ ಬೋಗಿಗಳಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಸ್ಥಳಾಂತರಿಸಲಾಗುತ್ತಿದೆ. ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗ ನೀಡಿರುವ ಮಾಹಿತಿಯ ಪ್ರಕಾರ ರಾತ್ರಿ 9:56 ರವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ.
ಅಧಿಕೃತ ಮೂಲಗಳ ಪ್ರಾಥಮಿಕ ಮಾಹಿತಿಯ ಪ್ರಕಾರ ಬಾಗಮತಿ ಎಕ್ಸ್‌ಪ್ರೆಸ್ ಗೆ ಮುಖ್ಯ ಮಾರ್ಗದಲ್ಲಿ ಗುಡೂರು ಕಡೆಗೆ ತೆರಳಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ, ಅದು ತಪ್ಪಾಗಿ ಕವರೈಪೆಟ್ಟೈ ನಿಲ್ದಾಣದ ಲೂಪ್ ಲೈನ್ ಅನ್ನು ಪ್ರವೇಶಿಸಿತು, ಅಲ್ಲಿ ಸರಕು ರೈಲು ನಿಂತಿತ್ತು. ಘಟನೆಯು ಮಾನವ ದೋಷದಿಂದ ಸಂಭವಿಸಿದೆಯೇ ಅಥವಾ ತಾಂತ್ರಿಕ ದೋಷದಿಂದ ಸಂಭವಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಖ್ಯ ಮಾರ್ಗಕ್ಕೆ ತೆರಳಲು ಸಿಗ್ನಲ್ ನೀಡಿದಾಗ ಲೂಪ್ ಲೈನ್‌ಗೆ ಹಳಿಗಳನ್ನು ಸೆಟ್ ಮಾಡಲಾಗಿತ್ತೇ ಎಂದು ತನಿಖೆ ಮಾಡಲು ಹಿರಿಯ ರೈಲ್ವೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ಬಾಗ್ಮತಿ ಎಕ್ಸ್‌ಪ್ರೆಸ್, ದರ್ಭಾಂಗ ಮಾರ್ಗವಾಗಿ, ಪೆರಂಬೂರ್‌ನಿಂದ ಸಂಜೆ 7:50 ಕ್ಕೆ ಹೊರಟು ರಾತ್ರಿ 8:30 ರ ಸುಮಾರಿಗೆ ಕವರೈಪೆಟ್ಟೈ ತಲುಪಿತು. ಆರಂಭದಲ್ಲಿ 109 ಕಿಮೀ/ಗಂಟೆಗೆ ವೇಗದಲ್ಲಿ ಪ್ರಯಾಣಿಸುತ್ತಿದ್ದ ರೈಲು, ಲೂಪ್ ಲೈನ್‌ಗೆ ಪ್ರವೇಶಿಸುವ ಮೊದಲು ತನ್ನ ವೇಗವನ್ನು 90 ಕಿಮೀ/ಗಂಟೆಗೆ ಇಳಿಸಿತು, ಅಲ್ಲಿ ಗಾರ್ಡ್ ಕೋಚ್ ಬಳಿ ನಿಂತಿದ್ದ ಸರಕು ರೈಲಿನ ಹಿಂದಿನ ಕೋಚ್‌ಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ಕು ಎಸಿ ಕೋಚ್‌ಗಳು ಹಳಿ ತಪ್ಪಿದರೆ, ಇತರ ಎರಡು ಕೋಚ್‌ಗಳು-ಒಂದು ಪವರ್ ಕಾರ್ ಮತ್ತು ಮೋಟಾರ್ ವ್ಯಾನ್‌ಗೆ ಬೆಂಕಿ ಹೊತ್ತಿಕೊಂಡಿತು.
ಸ್ಥಳಕ್ಕಾಗಮಿಸಿದ ಸ್ಥಳೀಯರು ಮತ್ತು ನೆರೆಹೊರೆಯವರು ಪ್ರಯಾಣಿಕರನ್ನು ರಕ್ಷಿಸಲು ಸಹಾಯ ಮಾಡಿದರು. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆ ಸನ್ನದ್ಧವಾಗಿದೆ ಎಂದು ತಿರುವಳ್ಳೂರು ಜಿಲ್ಲಾಧಿಕಾರಿ ಪ್ರಭು ಶಂಕರ್ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಸಹಾಯಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಐದು ತಂಡಗಳನ್ನು ಕರೆಸಲಾಗಿದೆ.
ತಿರುವಳ್ಳೂರು ಜಿಲ್ಲಾಧಿಕಾರಿಗಳು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ, ರೈಲು ಅಪಘಾತದಲ್ಲಿ 19 ಮಂದಿ ಗಾಯಗೊಂಡಿದ್ದು, ಇದುವರೆಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಖಚಿತಪಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಸ್ಟಾನ್ಲಿ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಗಿದ್ದು, ಇತರರು ಪೊನ್ನೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೈಲಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಸಾಗಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ದಕ್ಷಿಣ ರೈಲ್ವೆಯ ಅಧಿಕೃತ ಹೇಳಿಕೆ ತಿಳಿಸಿದೆ. ಘಟನೆಯ ನಂತರ ಹಲವು ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ತಿರುವಳ್ಳೂರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮುಖ್ಯ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಈ ಪ್ರಯತ್ನಗಳನ್ನು ಖುದ್ದಾಗಿ ನೋಡಿಕೊಳ್ಳುವಂತೆ ಸೂಚಿಸಿದರು. ಹೆಚ್ಚುವರಿಯಾಗಿ, ಅಪಘಾತ ಸ್ಥಳಕ್ಕೆ ಧಾವಿಸುವಂತೆ ಸಿಎಂ ಸಚಿವ ಎಸ್‌ಎಂ ನಾಸರ್‌ಗೆ ಸೂಚಿಸಿದರು.
ಸಹಾಯಕ್ಕಾಗಿ, ಪ್ರಯಾಣಿಕರು ಮತ್ತು ಅವರ ಕುಟುಂಬಗಳು ಚೆನ್ನೈ ವಿಭಾಗದಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:
ಸಹಾಯವಾಣಿ ಸಂಖ್ಯೆ 1: 04425354151
ಸಹಾಯವಾಣಿ ಸಂಖ್ಯೆ 2: 04424354995
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…