ಸರ್ಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಇಲ್ಲಿ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಘೋಷಣೆ ಹಾಗೂ ಲಾಂಛನ ಅನಾವರಣ ಕಾರ್ಯಕ್ರಮ ನಡೆಯಿತು.

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿಶ್ವನಾಥ ಬಂಟ್ವಾಳ ಇವರು ಸಮಿತಿಯ ಪದಾಧಿಕಾರಿಗಳ ಮಾಹಿತಿ ಪತ್ರದ ಬಿಡುಗಡೆ ಮಾಡುವುದರ ಮೂಲಕ ಸ್ವಾಗತ ಸಮಿತಿಯ ಅಧಿಕೃತ ಘೋಷಣೆ ಮಾಡಿದರು. ಇದೇ ಸಂದರ್ಭದಲ್ಲಿ ಮಂಚಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಅನಾವರಣಗೊಳಿಸಲಾಯಿತು.ಕಳೆದ ಬಾರಿ ಅಮ್ಮುಂಜೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಪ್ರಧಾನ ಸಂಚಾಲಕರಾಗಿದ್ದ ಅಬೂಬಕ್ಕರ್ ಅಮ್ಮುಂಜೆ ಇವರು “ಸಾಹಿತ್ಯ ಸಮ್ಮೇಳನದ ಆಯೋಜನೆ ಎನ್ನುವುದು ಜೇನು ಸಂಗ್ರಹಿಸುವ ಕಾರ್ಯದಂತೆ. ಯಶಸ್ವಿಯಾದರೆ ಎಲ್ಲರಿಗೂ ಜೇನು ಹಂಚಿದಂತೆ. ಕೆಲವೊಮ್ಮೆ ಒಂದೆರಡು ಜೇನಿನ ದಾಳಿಯ ನೋವನ್ನು ಅನುಭವಿಸಲು ಸಿದ್ಧರಾಗಿರಬೇಕು. ಒಟ್ಟಾಗಿ ಒಂದು ಶಿಕ್ಷಣದ ಅಥವಾ ಅನುಭವದ ಪಾಠ ನಮಗೆ ಸಿಗುವುದು..” ಹೀಗೆ ತನ್ನ ಅನುಭವದ ಬುತ್ತಿ ಬಿಚ್ಚಿ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಪ್ರೇರಣೆ ನೀಡಿದರು.
ಸಂಕಪ್ಪ ಶೆಟ್ಟಿ , ಸರಪಾಡಿ ಅಶೋಕ್ ಕುಮಾರ್ ಶೆಟ್ಟಿ ತಮ್ಮ ಅನುಭವದ ಮಾತುಗಳನ್ನಾಡಿದರು. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಲಯನ್ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ ಮಾತನಾಡಿ, “ಕನ್ನಡ ಭಾಷೆಯ ಉಳಿವಿಗೆ ಇದೊಂದು ಉತ್ತಮ ಅವಕಾಶ. ಕನ್ನಡ ಭಾಷೆಯ ಕೃಷಿಗೆ ಈ ಸಮ್ಮೇಳನದ ಮೂಲಕ ಇನ್ನಷ್ಟು ಉತ್ತೇಜನ ಸಿಗುವಂತಾಗಲಿ. ಸಾಕಷ್ಟು ಸಾಹಿತಿಗಳನ್ನು ಕೊಡುಗೆಯಾಗಿ ನೀಡಿರುವ ಮಂಚಿಗೆ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆ ಮಾಡಲು ಮಂಚಿ – ಕೊಳ್ನಾಡು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಮೂಲಕ ಅವಕಾಶ ನೀಡಿರುವುದು ನಮಗೆ ಹೆಮ್ಮೆಯಾಗಿದೆ.” ಎಂದರು. ಸಮಿತಿ ಆಯೋಜನೆ ಮಾಡಿದ ಸಭೆಯಲ್ಲಿ ಸಾಹಿತ್ಯಾಭಿಮಾನಿಗಳು, ತಾಲೂಕು ಘಟಕದ ಪದಾಧಿಕಾರಿಗಳು, ಸ್ವಾಗತ ಸಮಿತಿಯ ಪದಾಧಿಕಾರಿಗಳು, ಮಂಚಿ ಕೊಳ್ನಾಡು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಶೀಲಾ ವಿಟ್ಲ ಹಾಗೂ ಪ್ರೌಢಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಸರ್ಕಳ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮಿತಿ ಎಲ್ಲಾ ಸಂಚಾಲಕರಿಗೆ ಸ್ವಾಗತ ಸಮಿತಿಯ ಮಾಹಿತಿ ಪತ್ರವನ್ನು ನೀಡುವ ಮೂಲಕ ಗುರುತಿಸಲಾಯಿತು. ಸಮಿತಿಯ ಪದಾಧಿಕಾರಿಗಳ ಮಾಹಿತಿ ಹಾಗೂ ಜವಾಬ್ದಾರಿಯ ಕುರಿತಾಗಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಪನ್ಯಾಸಕರಾದ ಎಂ ಡಿ ಮಂಚಿ ಇವರು ಮಾಹಿತಿ ನೀಡಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಸ್ವಾಗತ ಸಮಿತಿಯ ಪ್ರಧಾನ ಸಂಯೋಜಕರಾದ ರಾಮ್ ಪ್ರಸಾದ್ ರೈ ತಿರುವಾಜೆ ಇವರು ಸ್ವಾಗತಿಸಿದರು. ತಾಲೂಕು ಘಟಕದ ಗೌರವ ಕಾರ್ಯದರ್ಶಿ ಲಯನ್ ರಮಾನಂದ ನೂಜಿಪ್ಪಾಡಿ ಇವರ ವಂದಿಸಿದರು. ಶಿಕ್ಷಕ ಹರಿಪ್ರಸಾದ್ ಕುಲಾಲ್ ನಾರ್ಶ ಕಾರ್ಯಕ್ರಮ ನಿರ್ವಹಿಸಿದರು



