ಪುತ್ತೂರು; ಯುವಜನತೆಯ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು. ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಭದ್ರತೆ ಅವರಿಗೆ ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರೈ ಎಸ್ಟೇಟ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಮೂಲಕ ಯುವ ಸಮುದಾಯ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು. ಅಭಿವೃದ್ಧಿಯ ದೃಷ್ಟಿಯಿಂದ ವರ್ಷಗಳಲ್ಲಿ ಯುವಕರಿಗೆ ಕೆಲಸದ ಭದ್ರತೆ ದೊರಕಿಸಿಕೊಡಬೇಕು ಎನ್ನುವುದು ನನ್ನ ಗುರಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ಶಾಸಕರ ಕಚೇರಿಯಲ್ಲಿ ಶನಿವಾರ ರೈ ಎಸ್ಟೇಟ್ ಟ್ರಸ್ಟ್ ವತಿಯಿಂದ ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ನಮ್ಮ ಅಭಿವೃದ್ಧಿ ತೀರಾ ಹಿಂದುಳಿದಿದೆ. ಇಂತಹ ರಾಷ್ಟ್ರಗಳಿಂದ ಸುಮಾರು 150 ವರ್ಷ ಹಿಂದೆ ನಾವಿದ್ದೇವೆ. 1978ರಲ್ಲಿ ಮೆಟ್ರೋ ಆರಂಭಿಸಿದ ರಾಷ್ಟ್ರಗಳಿವೆ. ಆದರೆ ನಾವು ಮೆಟ್ರೋಗಾಗಿ ಈಗ ಕಂಬ ನೆಡುತ್ತಿದ್ದೇವೆ. ಭಾರತ ವಿಶ್ವಗುರು ಆಗಬೇಕಾದರೆ ಯುವ ಜನರಿಗೆ ಉದೋಗ ಕೊಡಬೇಕು. ಭಾರತದಲ್ಲಿ ಒಂದು ಕೆಲಸಕ್ಕೆ ಕನಿಷ್ಟ 6 ಮಂದಿಯನ್ನು ಬಳಕೆ ಮಾಡಲಾಗುತ್ತಿದೆ. ಅದೇ ವಿದೇಶಗಳಲ್ಲಿ ಕೇವಲ ಯಾಂತ್ರೀಕೃತ ವ್ಯವಸ್ಥೆಯಲ್ಲಿ ಈ 6 ಮಂದಿಯ ಕೆಲಸ ಮಾಡಲಾಗುತ್ತಿದೆ. ನಮ್ಮಲ್ಲಿ ಮಾನವಶ್ರಮವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದರು.
ಹೊಟ್ಟೆ ತುಂಬಾ ಉಣ್ಣದೆ ತಂದೆ ತಾಯಿ ಮಕ್ಕಳನ್ನು ಬೆಳೆಸುತ್ತಾರೆ. ಆದರೆ ಮಕ್ಕಳು ದಾರಿತಪ್ಪಿದಾಗ ಉಂಟಾಗುವ ನೋವು ತಂದೆ ತಾಯಿಯರ ಮನಸ್ಸಿಗೆ ದೊಡ್ಡ ಆಘಾತ ತರುತ್ತದೆ. ಯುವ ಜನರು ಯಾವತ್ತೂ ತಂದೆ ತಾಯಿಗೆ ನೋವು ಕೊಡಬಾರದು. ಛಲದಿಂದ ಉತ್ತಮ ಕೆಲಸ ಪಡೆದುಕೊಂಡು ಮನೆಮಂದಿಯನ್ನು ಸಾಕುವ ಕೆಲಸ ಮಾಡಿ. ಪ್ರತೀ ವರ್ಷವೂ ರೈ ಟ್ರಸ್ಟ್ ಮೂಲಕ ಉದ್ಯೋಗ ಮೇಳ ನಡೆಸಲಾಗುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳಿ. ನಿಮ್ಮ ಬದುಕನ್ನು ನೀವೇ ಕಟ್ಟಿಕೊಳ್ಳಿ ಎಂದು ಉದ್ಯೋಗಾಂಕ್ಷಿಗಳಿಗೆ ಅವರು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬಿಗ್ ಬ್ಯಾಗ್ಸ್ ಕಂಪೆನಿಯ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಮಮತಾ ಅವರು ಮಾತನಾಡಿ, ಗ್ರಾಮೀಣ ಭಾಗದಿಂದ ಯುವಜನತೆ ಕೆಲಸಕ್ಕೆ ಬರುವಂತಾಗಬೇಕು. ಪ್ರದೇಶ ವ್ಯಾಪ್ತಿಯ ಚೌಕಟ್ಟು ಹಾಕಿಕೊಂಡು ನಿಮ್ಮ ಅವಕಾಶ ಬಿಟ್ಟುಬಿಡಬೇಡಿ. ಅವಕಾಶಗಳನ್ನು ಬಳಸಿಕೊಳ್ಳಿ ಎಂದರು.
186 ಮಂದಿಗೆ ಉದ್ಯೋಗ;
ರೈ ಎಸ್ಟೇಟ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜನೆಗೊಂಡ ಉದ್ಯೋಗಮೇಳದಲ್ಲಿ ಒಟ್ಟು 424 ಮಂದಿ ಉದ್ಯೋಗಾಂಕ್ಷಿಗಳು ನೋಂದಾವಣೆ ಮಾಡಿಕೊಂಡಿದ್ದರು. ನೇರ ಸಂದರ್ಶನಕ್ಕೆ 268 ಮಂದಿ ಹಾಜರಾಗಿದ್ದರು. ವಿವಿಧ ಸಂಸ್ಥೆಗಳಿಗೆ ನೇರ ಸಂದರ್ಶನದಲ್ಲಿ 186 ಮಂದಿ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮಾಸ್ಟರ್ ಫ್ಲಾನರಿಯ ನಿರ್ದೇಶಕ ಆಕಾಶ್ ಎಚ್.ಕೆ, ದರ್ಬೆ ಪಶುಪತಿ ಎಲೆಕ್ಟ್ರಿಕಲ್ಸ್ ಮಾಲಕ ಪಶುಪತಿ ಶರ್ಮ, ಕಾವು ಹೇಮನಾಥ ಶೆಟ್ಟಿ, ಭೂನ್ಯಾಯ ಮಂಡಳಿ ಸದಸ್ಯರಾದ ಕೃಷ್ಣಪ್ರಸಾದ್ ಆಳ್ವ ಮತ್ತು ನಿರಂಜನ್ ರೈ ಮಟಂತಬೆಟ್ಟು, ಮುರಳೀಧರ್ ರೈ ಮಟಂತಬೆಟ್ಟು, ಅನಿತಾ ಹೇಮನಾಥ ಶೆಟ್ಟಿ, ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಪುತ್ತೂರು ಪುಡಾ ಸದಸ್ಯ ನಿಹಾಲ್ ಶೆಟ್ಟಿ,ಹರಿಪ್ರಸಾದ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.



