ಬಂಟ್ವಾಳ : ೫೦೦ ವರ್ಷಗಳ ಇತಿಹಾಸ ಹೊಂದಿದ, ಕೃಷಿ ಪ್ರಧಾನ ತುಳು ನಾಡಿನಿಂದ ದೂರ ಸರಿಯುತ್ತಿರುವ ಸಾಂಪ್ರದಾಯಿಕ ಆಚರಣೆಯಾದ ಕಂಬಳ ಕೋರಿ ಎನ್ನುವ ಗದ್ದೆ ಪೂಜೆ ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗುತ್ತಿನ ಮನೆಯಲ್ಲಿ ಸಂಪ್ರದಾಯ ಬದ್ಧವಾಗಿ ರವಿವಾರ ನಡೆಯಿತು.

ಕಂಬಳ ಕೋರಿ : ಕೃಷಿ ಸಂಸ್ಕೃತಿಯ ಪ್ರಕಾರ ದೈವಗಳ ಆರಾಧನೆಯೊಂದಿಗೆ ಭೂದೇವಿಯನ್ನು ಆರಾಧಿಸುವ ಕ್ರಮ ಕಂಬಳ ಕೋರಿ ಎನ್ನುವ ಗದ್ದೆ ಪೂಜೆ.
ಆಚರಣೆಯ ವಿಶೇಷತೆ: ಕಂಬಳ ಕೋರಿ ನಡೆಸಲು ಗುತ್ತಿನ ಮನೆಯ ಯಜಮಾನರು ದಿನ ನಿಗದಿಪಡಿಸಿದ ಬಳಿಕ ದೈವದ ಪಾತ್ರಿ ಮೂಲಕ ಗ್ರಾಮಸ್ಥರಿಗೆ ಆಮಂತ್ರಣವನ್ನು ನೀಡುತ್ತಾರೆ.
ಕಂಬಳ ಕೋರಿಯ ದಿನ ಕಂಬಳ ಗದ್ದೆಗೆ ಕೋಣಗಳನ್ನು ಇಳಿಸಿ ಗದ್ದೆ ಉಳುತ್ತಾರೆ. ಇತ್ತ ಗುತ್ತಿನ ಮನೆಯಲ್ಲಿ ಗ್ರಾಮ ದೈವಗಳಿಗೆ ಪರ್ವ(ವಿಽಪೂರ್ವಕ ಆಹಾರ) ಹಾಕಿಸಿ, ಪಂಜುರ್ಲಿ ದೈವದ ಹಗಲು ನೇಮೋತ್ಸವ ನಡೆಯುತ್ತದೆ. ದೈವ ಅಣಿಏರಿಸುವ ಮೊದಲು ದೈವದ ಮುಕ್ಕಾಲ್ದಿ(ಪಾತ್ರಿ), ನಾಗಬ್ರಹ್ಮ ದೈವ(ಪಾತ್ರಿ), ಗುತ್ತಿನ ಯಜಮಾನ, ತಂತ್ರಿ ಬಳಗ ಹಾಗೂ ಗ್ರಾಮಸ್ಥರೊಂದಿಗೆ ಕೊಂಬು ವಾಲಗದ ಹಿಮ್ಮೇಳದೊಂದಿಗೆ ಕಂಬಳ ಗದ್ದೆಗೆ ಬರುತ್ತಾರೆ.

ಪೂಕರೆ ಬಂಡಿ
ಅದಾಗಲೇ ಗದ್ದೆಯ ಬದಿಯಲ್ಲಿ ನಾಗಬ್ರಹ್ಮ ದೈವ ಅಣಿ ಏರಿಸಿ ಸಿದ್ಧಗೊಂಡಿರುತ್ತದೆ. ಅಲ್ಲಿ ಕಲ್ಲಿನ ಚಕ್ರವುಳ್ಳ ಸಾಗುವಾನಿ ಮರದ ಪಟ್ಟಿಗಳುಳ್ಳ ತೇರಿನಾಕಾರದ ಪೂಕರೆ ಬಂಡಿಯನ್ನು ಕೇಪುಳ ಹೂವುಗಳಿಂದ ಅಲಂಕರಿಸಿ ಸಿದ್ಧಗೊಳಿಸಲಾಗಿರುತ್ತದೆ. ಈ ಪೂಕರೆ ಬಂಡಿಯನ್ನು ಎಳೆಯಲು ಪಲ್ಲೆ ಎಂಬ ಬೀಳಲನ್ನೇ ಬಳಸಲಾಗುತ್ತದೆ. ಬಳಿಕ ಉಳುಮೆ ಮಾಡುತ್ತಿದ್ದ ಕೋಣಗಳನ್ನು ಮೇಲೆ ಬರುವಂತೆ ಹಾಗೂ ಪೂಕರೆ ಬಂಡಿಯನ್ನು ಎಳೆಯುವಂತೆ ನಾಗಬ್ರಹ್ಮ ದೈವ ಪಾತ್ರಿ ಅಪ್ಪಣೆ ನೀಡುತ್ತಾರೆ. ಗ್ರಾಮಸ್ಥರೆಲ್ಲ ಸೇರಿ ಸಂಭ್ರಮದಿಂದ ಪೂಕರೆ ಬಂಡಿಯನ್ನು ಎಳೆದುಕೊಂಡು ಗದ್ದೆಯ ಮಧ್ಯ ಭಾಗಕ್ಕೆ ತಂದು ನಿಲ್ಲಿಸುತ್ತಾರೆ. ವಿಶಾಲ ಗದ್ದೆಗೆ ನಾಗಬ್ರಹ್ಮ ದೈವ ಪಾತ್ರಿ ಎಲ್ಲರ ಜೊತೆ ಸುತ್ತು ಬಂದು ಉತ್ತಮ ಫಸಲು ಬರುವಂತೆ ಹರಸುತ್ತಾರೆ. ದೈವದ ಜೊತೆ ಓರ್ವ ವೇಷಧಾರಿ ಇದ್ದು ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲು ಸೂಚನೆ ನೀಡುತ್ತದೆ. ಫಸಲಿಗೆ ಕೀಟ ಬಾಧೆ ಬಾರದಂತೆ ತಡೆಯಲು ಉರವೆ ಎಂಬ ತೆಂಗಿನ ಗರಿಯಿಂದ ತಯಾರಿಸಿದ ಹಾವಿನಾಕೃತಿಯ ರಕ್ಷಾದಾರವನ್ನು ಗದ್ದೆ ಬದಿಯ ತೆಂಗಿನ ಮರಕ್ಕೆ ಕಟ್ಟಲಾಗುತ್ತದೆ. ನಾಗಬ್ರಹ್ಮ ದೈವದ ವಾಹನವಾಗಿ ಕುದುರೆಯನ್ನು ತೆಂಗಿನ ಹಸಿ ಸೋಗೆಯಿಂದ ಸಾಂಕೇತಿಕವಾಗಿ ನಿರ್ಮಿಸುತ್ತಾರೆ. ಅದನ್ನು ನಾಗಬನಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿಂದ ಗುತ್ತಿನ ಮನೆಗೆ ಹಿಂದಿರುಗಿ ನಾಗಬ್ರಹ್ಮ ದೈವಕ್ಕೆ ನೇಮ ನಡೆಯುತ್ತದೆ. ಜತೆಗೆ ಪಂಜುರ್ಲಿ ದೈವದ ನೇಮ ಮುಂದುವರಿದು ದೈವ ನುಡಿ ಕೊಡುವುದರೊಂದಿಗೆ ಮುಕ್ತಾವಾಗುತ್ತದೆ.
ಈ ಕಾರ್ಯಕ್ರಮದಲ್ಲಿ ದೈವ ಪಾತ್ರಿಗಳು, ಬ್ಯಾಂಡ್, ವಾಲಗದವರ ಸಹಿತ ಎಲ್ಲ ಕಾರ್ಯಗಳನ್ನು ಕಾಡಬೆಟ್ಟು ಗ್ರಾಮದವರೇ ನಿರ್ವಹಿಸುವುದು ವಿಶೇಷ. ದೈವಾರಾಧನೆ ಮೂಲಕ ಈ ಕಾರ್ಯದಲ್ಲಿ ಗ್ರಾಮಸ್ಥರೆಲ್ಲರೂ ಒಂದಾಗಿ ಭಾಗವಹಿಸುತ್ತಾರೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ತಂತ್ರಿಗಳಾದ ನಾರಾಯಣ ಶಿಬರಾಯ, ಜಿ.ಪಂ.ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಅನುವಂಶೀಯ ಆಡಳಿತದಾರ ಮಹಾವೀರ ಅಜ್ರಿ ಕಾಡಬೆಟ್ಟುಗುತ್ತು, ಕಾವಳಪಡೂರು ಗ್ರಾ.ಪಂ.ಅಧ್ಯಕ್ಷ ಲಕ್ಷ್ಮೀ ನಾರಾಯಣ ಶರ್ಮ, ಪ್ರಮುಖರಾದ ಪಿ.ಜಿನರಾಜ ಆರಿಗ, ಸತೀಶ್ ಕುಮಾರ್ ಜೈನ್ ಪಿಲಿಂಗಾಲು,ಭರತ್ ಕುಮಾರ್ ಜೈನ್ ಬಲ್ಲೋಡಿಗುತ್ತು, ಬಾಳಕೃಷ್ಣ ಅಂಚನ್, ಹಂಸರಾಜ ಜೈನ್ ಪುರಿಯ, ಸುರೇಂದ್ರ ಕುಮಾರ್ ಜೈನ್,ಶ್ರೇಯಂಸ ಜೈನ್, ರಂಜಿತ್ ಜೈನ್, ಅಮಿತ್ ಕುಮಾರ್, ರಾಜ್ ಪ್ರಸಾದ್ ಆರಿಗ ಮತ್ತಿತರರಿದ್ದರು.



