ಕರಾವಳಿಯಾದ್ಯಂತ ಭಾರಿ ಮಳೆ, ತೋಡಿನಂತಾದ ರೋಡು!

ಮಂಗಳೂರು : ಫೆಂಗಾಲ್ ಚಂಡಮಾರುತ ದಕ್ಷಿಣ ಭಾರತದಾದ್ಯಂತ ಭಾರಿ ಕೋಲಾಹಲ ಸೃಷ್ಟಿಸುತ್ತಿದ್ದು, ಇದೀಗ ಪಶ್ಚಿಮ ಕರಾವಳಿಗೂ ಇದರ ಪ್ರಭಾವ ತಟ್ಟಿದೆ. ಸೋಮವಾರ ಸಂಜೆಯಿಂದ ಸುರಿದ ಭಾರಿ ಮಳೆಗೆ ಮಂಗಳೂರು, ಉಡುಪಿ, ಕಾಸರಗೋಡಿನ ರಾಷ್ಟ್ರೀಯ ಹೆದ್ದಾರಿ ಸೇರಿ ಹಲವು ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡೆಚಡೆಯಾಯಿತು.
ಸೋಮವಾರ ಬೆಳಗ್ಗಿನಿಂದಲೇ ಮಂಗಳೂರು ಸೇರಿ ಕರಾವಳಿಯಾದ್ಯಂತ ಮೋಡ ಕವಿದ ವಾತಾವರಣದೊಂದಿಗೆ ಗಾಳಿಯ ವೇಗ ಹೆಚ್ಚಿತ್ತು. ಸಂಜೆ ೩. ೩೦ ರ ವೇಳೆಗೆ ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಇನ್ನೂ ಮೂರೂ ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮವಾಗಿ ದ.ಕ. , ಉಡುಪಿ, ಕಾಸರಗೋಡು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನದಿಗಳಲ್ಲೂ ನೀರಿನ ಮಟ್ಟ ಹೆಚ್ಚಾಗಿದ್ದು, ಕುಮಾರಧಾರ ನದಿಯು ಮೈದುಂಬಿ ಹರಿಯುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರಾ ಮಹೋತ್ಸವವೂ ನಡೆಯುತ್ತಿದ್ದು, ತೀರ್ಥ ಸ್ನಾನಕ್ಕೆ ನದಿಗೆ ಇಳಿಯದಂತೆ ಸೂಚಿಸಲಾಗಿದೆ. ಸದ್ಯ ಜಿಲ್ಲಾದ್ಯಂತ ಅರೇಂಜ್ ಅಲರ್ಟ್ ಘೋಷಿಸಲಾಗಿದೆ.
ಎಲ್ಲೆಲ್ಲಿ ಸಮಸ್ಯೆ?
ಫೆಂಗಾಲ್ ತಂದ ಮಳೆಯಿಂದಾಗಿ ಮಂಗಳೂರು ನಗರದ ಕೂಳೂರು, ಕೆ.ಪಿ..ಟಿ., ಜ್ಯೋತಿ ಸರ್ಕಲ್ ಸೇರಿ ಹಲವು ರಸ್ತೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಬಜ್ಪೆ-ಅದ್ಯಪಾಡಿ ರಸ್ತೆಗೆ ವಿಮಾನ ನಿಲ್ದಾಣದ ರನ್ ವೇ ಮಣ್ಣು ಕುಸಿದ ಪರಿಣಾಮ ಸಂಪರ್ಕ ಕಡಿತವಾಗಿದೆ. ಬಂದರಿನಲ್ಲಿ ಲಂಗಾಮು ಹಾಕಿ ನಿಲ್ಲಿಸಿದ್ದ ದೋಣಿಗಳು ನೀರು ಪಾಲಾಗಿದೆ. ರಾಷ್ತ್ರೀಯ ಹೆದ್ದಾರಿ ೬೬ರ ತಲಪಾಡಿ ಬಳಿ ಹೆದ್ದಾರಿಯಲ್ಲಿ ನೀರು ನಿಂತು ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಯಿತು.



