ಬಂಟ್ವಾಳ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವನ ಮೇಲೆ ಕಣಜ ಹುಳಗಳು ದಾಳಿ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಕಟ್ಟೆ ಎಂಬಲ್ಲಿ ನಡೆದಿದೆ.

ಕಾವಳಕಟ್ಟೆ ನಿವಾಸಿ ಮುಹೀಬ್ ( 25) ಎಂಬವರ ಮೇಲೆ ದಾಳಿಯಾಗಿದೆ.
ಕಾವಳಕಟ್ಟೆಯಿಂದ ಮನೆಯ ಕಡೆ ಒಳಗಿನ ರಸ್ತೆಯ ಮೂಲಕ ಹೋಗುತ್ತಿದ್ದ ಪಾದಾಚಾರಿ ಮುಹೀಬ್ ಅವರಿಗೆ ಕಣಜಹುಳಗಳ ಗುಂಪು ದಾಳಿ ಮಾಡಿದೆ ಎಂದು ಹೇಳಲಾಗಿದೆ.
ದಾಳಿಗೊಳಗಾದ ಅವರನ್ನು ಸ್ಥಳೀಯ ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ , ಗಂಭೀರವಾದ ಸ್ಥಿತಿಯಲ್ಲಿದ್ದ ಕಾರಣ ಅವರನ್ನು 108 ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಲೆ ಹಾಗೂ ಇತರ ದೇಹದ ಎಲ್ಲಾ ಕಡೆಗಳಿಗೂ ಕಣಜ ಹುಳಗಳು ದಾಳಿಮಾಡಿದ ಪರಿಣಾಮ ಆರೋಗ್ಯದಲ್ಲಿ ಏರುಪೇರುಗಳು ಕಾಣಬಹುದು ಎಂಬ ನಿಟ್ಟಿನಲ್ಲಿ ಮುಂಜಾಗ್ರತಾ ವೈದ್ಯಕೀಯ ಚಿಕಿತ್ಸೆಗಾಗಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಕಾವಳಕಟ್ಟೆ ಅದೇ ರಸ್ತೆಯಲ್ಲಿ ಇನ್ನೊರ್ವ ಪಾದಾಚಾರಿ ಮೇಲೆ ಕೂಡ ಕಣಜಹುಳಗಳು ದಾಳಿ ಮಾಡಿವೆ ಎಂಬ ಸುದ್ದಿಯಾಗಿದೆಯಾದರೂ ಅವರು ಯಾರು? ಮತ್ತು ಯಾವ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಯಾವುದೇ ಸರಿಯಾದ ಮಾಹಿತಿ ಲಭ್ಯವಾಗಿಲ್ಲ.



