ಉಡುಪಿ: ಎಲ್ಲೂರು, ನಂದಿಕೂರಿನಿಂದ ಕಾಸರಗೋಡಿಗೆ 400ಕೆವಿ ವಿದ್ಯುತ್ ಲೈನ್ ಅಳವಡಿಸಲು ಟವರ್ ನಿರ್ಮಾಣಕ್ಕೆ ಪ್ರತಿರೋಧ ಒಡ್ಡಿ ಇನ್ನಾ ಗ್ರಾಮಸ್ಥರು ಅಣ್ಣಾಜಿಗೋಳಿಯ ಗುಡ್ಡ ಪ್ರದೇಶದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಒಂದು ವಾರಕ್ಕೆ ಕಾಲಿಟ್ಟಿದೆ.

ಯಾವುದೇ ಕಾರಣಕ್ಕೂ ತಾವು ಇನ್ನಾ ಗ್ರಾಪಂ ವ್ಯಾಪ್ತಿಯಲ್ಲಿ ಖಾಸಗಿ ಜಾಗದಲ್ಲಿ ಟವರ್‌ಗಳ ನಿರ್ಮಾಣಕ್ಕೆ ಅವಕಾಶವನ್ನು ನೀಡುವುದಿಲ್ಲ ಎಂದು ಉಡುಪಿ-ಕಾಸರಗೋಡು 400ಕೆವಿ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಅಮರನಾಥ ಶೆಟ್ಟಿ ಹಾಗೂ ಕಾರ್ಕಳದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ನಡೆದಿರುವ ಧರಣಿಯಲ್ಲಿ ಪಾಲ್ಗೊಂಡಿರುವ ಪ್ರತಿಭಟನಕಾರರು ಘೋಷಿಸಿದರು.

ಕಳೆದ ಮಂಗಳವಾರ ಮುಂಜಾನೆ ಇನ್ನಾ ಗ್ರಾಪಂ ವ್ಯಾಪ್ತಿಯ ಅಣ್ಣಾಜಿಗೋಳಿಯ ಗಣಪತಿ ಹೆಗ್ಡೆ ಎಂಬವರಿಗೆ ಸೇರಿದ ಖಾಸಗಿ ಜಮೀನಿನಲ್ಲಿ ಯಾವುದೇ ಪೂರ್ವಸೂಚನೆಯನ್ನು ನೀಡದೇ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಟವರ್ ನಿರ್ಮಾಣಕ್ಕಾಗಿ ಜೆಸಿಬಿ ಯಂತ್ರದ ಮೂಲಕ ಹೊಂಡ ತೆಗೆಯಲು ಪ್ರಾರಂಭಿಸುತಿದ್ದಂತೆ ಸುದ್ದಿ ತಿಳಿದ ಗ್ರಾಮಸ್ಥರು, ಹೋರಾಟ ಸಮಿತಿಯ ಪದಾಧಿಕಾರಿಗಳು, ರೈತ ಸಂಘದ ಮುಖಂಡರು ಸ್ಥಳದಲ್ಲಿ ಜಮಾಯಿಸಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
400ಕೆವಿ ಹೈಟೆನ್ಷನ್ ವಿದ್ಯುತ್ ಲೈನ್‌ನ್ನು ಎಳೆಯಲು ಪಲಿಮಾರು ಹಾಗೂ ಇನ್ನಾ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 17 ಟವರ್ ಗಳನ್ನು ಹಾಕುವ ಯೋಜನೆ ಇದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿಯನ್ನು ವಿದ್ಯುತ್ ತಯಾರಿಸುವ ಎಲ್ಲೂರಿನಲ್ಲಿರುವ ಅದಾನಿ ಅವರ ಯುಪಿಸಿಎಲ್ ಕಂಪೆನಿಯಾಗಲೀ, ವಿದ್ಯುತ್ ಲೈನ್ ಅಳವಡಿಸುವ ಗುತ್ತಿಗೆದಾರ ಕಂಪೆನಿಯಾಗಲೀ ಇದುವರೆಗೆ ನೀಡಿಲ್ಲ. ಯಾರಿಗೂ ನೋಟೀಸನ್ನು ಸಹ ಈವರೆಗೆ ನೀಡಿಲ್ಲ ಎಂದು ಗ್ರಾಮಸ್ಥರ ಆರೋಪಿಸಿದರು.
ಹೈಟೆನ್ಷನ್ ವಿದ್ಯುತ್ ಲೈನ್ ಹಾದುಹೋಗುವುದರಿಂದ ಅದು ಹಾದು ಹೋಗುವ ವ್ಯಾಪ್ತಿ ಪ್ರದೇಶದ ಜನರು ಎದುರಿಸುವ ಸಂಕಷ್ಟದ ಅನುಭವ ನಮಗಿದೆ. ಎಲ್ಲೂರಿನಿಂದ ಹಾಸನಕ್ಕೆ 200ಕೆ.ವಿ. ವಿದ್ಯುತ್ ಹೋಗುವ ಲೈನ್‌ನ ಎಂಟು ಟವರ್‌ಗಳು ಈಗಾಗಲೇ ಇನ್ನಾದಲ್ಲಿದೆ. ಇದರಿಂದ ಗ್ರಾಮಸ್ಥರು ಕೃಷಿಯೂ ಸೇರಿ ದಂತೆ ಅನುಭವಿಸುತ್ತಿರುವ ವಿವಿದ ರೀತಿಯ ಯಾತನೆಗಳಿಗೆ ಮುಕ್ತಿಯೇ ಇಲ್ಲವಾಗಿದೆ. ಇದರೊಂದಿಗೆ ಪಾದೂರಿಗೆ ಪೈಪ್ ಲೈನ್ ಕೂಡಾ ಇನ್ನಾ ದಿಂದಲೇ ಹೋಗಿದ್ದು, ಜನರು ಎಲ್ಲಾ ರೀತಿಯಿಂದಲೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ನಾವು ಅಭಿವೃದ್ಧಿಗೆ ವಿರೋಧಿಗಳಲ್ಲ. ಆದರೆ ಹಾಸನಕ್ಕೆ ಹೋಗಿರುವ ವಿದ್ಯುತ್‌ಲೈನ್‌ನಿಂದ ಊರಿನಲ್ಲಿ ಶೇ.50ರಷ್ಟು ಕೃಷಿ ನಾಶವಾಗಿದೆ. ಈ ಯೋಜನೆಯೂ ಬಂದರೆ ಜನ ಊರು ಬಿಟ್ಟು ಹೋಗಬೇಕಾಗುತ್ತದೆ. ಆದುದರಿಂದ ಬದಲಿ ಪರಿಹಾರೋಪಾಯದೊಂದಿಗೆ ಅವರು ವಿದ್ಯುತ್ ಲೈನ್ ಕೊಂಡೊಯ್ಯಲಿ. ಅಂಡರ್‌ಗ್ರೌಂಡ್‌ನಲ್ಲಿ ಅದನ್ನು ಒಯ್ಯುವುದು ಸುರಕ್ಷಿತ ಮಾರ್ಗ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.



