ಮಂಗಳೂರು: ಆರೋಗ್ಯ ಕೇಂದ್ರಗಳಲ್ಲಿ ಇರುವ ಆರೋಗ್ಯ ಇಲಾಖೆ ಸಿಬ್ಬಂದಿಗಳೇ ಇಸಿಜಿ ಯಂತ್ರದ ಬಳಕೆಯನ್ನು ಕಲಿತುಕೊಂಡು ಅದರ ಸದ್ಭಳಕೆಗೆ ಮುಂದಾಗಬೇಕು ಎಂದು ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಕಾರ್ಡಿಯೋಲಜಿ ಎಟ್ ಡೋರ್‌ಸ್ಟೆಪ್ ಫೌಂಡೇಶನ್, ದ.ಕ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಎಂಆರ್‌ಪಿಎಲ್ ಪ್ರಾಯೋಜನೆಯಲ್ಲಿ ೬೪ ಇಸಿಜಿ ಯಂತ್ರಗಳ ಹಸ್ತಾಂತರ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಸಿಜಿ ಯಂತ್ರಗಳನ್ನು ಎಂಆರ್‌ಪಿಎಲ್ ಒದಗಿಸಿಕೊಟ್ಟಿದೆ, ಇದರ ಸದ್ಭಳಕೆಯಾಗಬೇಕು, ಹೃದಯ ಸಂಬಂಧಿ ತೊಂದರೆಗಳಿಗೆ ಆಗಮಿಸುವವರ ಇಸಿಜಿ ಪರೀಕ್ಷೆ ಸಕಾಲದಲ್ಲಿ ಆಗುವುದರಿಂದ ಅವರ ಜೀವರಕ್ಷಣೆ ಸಾಧ್ಯವಾಗಲಿದೆ. ಅಲ್ಲದೆ ಜನರೂ ಕೂಡ ಇತರ ಆರೋಗ್ಯ ಸಮಸ್ಯೆಗೆ ನೀಡುವಷ್ಟೇ ಮಹತ್ವವನ್ನು ಹೃದಯಸಂಬಂಧಿ ವಿಚಾರಗಳಿಗೂ ನೀಡಬೇಕು ಎಂದರು.
ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಮಾತನಾಡಿ, ಇಸಿಜಿ ಯಂತ್ರಗಳು ಇದ್ದರೂ ಸರಿಯಾಗಿ ಬಳಕೆಯಾಗುವುದಿಲ್ಲ. ಅವುಗಳನ್ನು ತೆಗೆದುಕೊಂಡು ಹೋಗಿ ಹಾಗೆಯೇ ಇರಿಸಿದರೆ ಪ್ರಯೋಜನವಿಲ್ಲ. ಇಸಿಜಿ ಯಂತ್ರ ಬಳಸುವುದಕ್ಕೆ ವೈದ್ಯರೇ ಬೇಕಾಗಿಲ್ಲ, ಬದಲಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಅದರ ಬಳಕೆ ಕಲಿತು ಜನರಿಗೆ ನೆರವಾಗಬೇಕು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಮಾತನಾಡಿ, ಇಸಿಜಿ ಯಂತ್ರಗಳನ್ನು ನಮ್ಮ ಕ್ಲಿನಿಕ್, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಒದಗಿಸಲಾಗುತ್ತಿದೆ. ಇನ್ನಷ್ಟು ಮಂದಿ ಪ್ರಾಯೋಜಕತ್ವ ವಹಿಸಿದರೆ ಇತರ ಬಾಕಿ ಇರುವ ಆರೋಗ್ಯ ಕೇಂದ್ರಗಳಿಗೂ ಇಸಿಜಿ ಮಷಿನ್ ನೀಡಬಹುದು. ಇದರಿಂದ ಜನರಿಗೆ ಸಾಕಷ್ಟು ನೆರವಾಗಲಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್ ಮಾತನಾಡಿ, ಜಿಲ್ಲೆಯ ವಿವಿಧ ಕಡೆಗಳಲ್ಲಿರುವ ಜನರು ನಗರದಲ್ಲಿ ಇರುವವಷ್ಟು ಭಾಗ್ಯಶಾಲಿಗಳಲ್ಲ. ಯಾವುದೇ ಹೃದ್ರೋಗ ಲಕ್ಷಣ ಕಂಡುಬಂದಾಗ ನಗರಕ್ಕೆ ಬರಲು ಸಮಯ ತಗಲುತ್ತದೆ. ಹಾಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ಇಸಿಜಿ ಯಂತ್ರಗಳು ಬಂದಾಗ ಅದರ ಮೂಲಕ ತಪಾಸಣೆ ಮಾಡಿ ಗೋಲ್ಡನ್ ಅವರ್‌ನಲ್ಲಿ ಚಿಕಿತ್ಸೆ ನೀಡುವುದು ಸಾಧ್ಯವಾಗುತ್ತದೆ ಎಂದರು.
ಎಂಆರ್‌ಪಿಎಲ್ ಮಾನವ ಸಂಪನ್ಮೂಲ ವಿಭಾಗದ ಜಿಜಿಎಂ ಕೃಷ್ಣ ಹೆಗ್ಡೆ ಮಾತನಾಡಿ, ಎಂಆರ್‌ಪಿಎಲ್ ಸಂಸ್ಥೆ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ಸಿಎಸ್‌ಆರ್ ನಿದಿಯಡಿ ನೆರವು ನೀಡುತ್ತಾ ಬಂದಿದೆ. ಈಗ ನೀಡಲಾಗಿರುವ ಇಸಿಜಿ ಯಂತ್ರಗಳು ಗರಿಷ್ಠ ಮಟ್ಟದಲ್ಲಿ ಬಳಕೆಯಾಗಲಿ ಎಂದು ಹಾರೈಸಿದರು.
ಮಂಗಳೂರು ನಗರದ ಹಾಗೂ ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ನಮ್ಮ ಕ್ಲಿನಿಕ್‌ಗಳಿಗೆ ಒಟ್ಟು ೬೪ ಇಸಿಜಿ ಯಂತ್ರಗಳನ್ನು ಇದೇ ವೇಳೆ ವಿತರಿಸಲಾಯಿತು.



