ಬೆಳ್ತಂಗಡಿ: ಆಟವಾಡುತ್ತಿದ್ದ ಮಗು ವಿಧಿಯ ಆಟಕ್ಕೆ ಬಲಿಯಾಗಿರುವ ದಾರುಣ ಘಟನೆ ನಡೆದಿದೆ. ಉಯ್ಯಾಲೆಯಲ್ಲಿ ಆಟ ಆಡುತ್ತಿದ್ದ ವೇಳೆ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕನೋರ್ವ ಮೃತಪಟ್ಟಿರುವ ಘಟನೆ ಜುಲೈ 16 ರಂದು ಸಂಜೆ ವೇಳೆ ಬೆಳ್ತಂಗಡಿ ತಾಲೂಕಿನ ಮೂಲವಂತಿಕೆ ಗ್ರಾಮದ ಮಂಟಮೆಯಲ್ಲಿ ನಡೆದಿದೆ. ಮಂಟಮೆ ನಿವಾಸಿ ಬಾಲಕೃಷ್ಣ ಎಂಬವರ ಪುತ್ರ ಶ್ರೀಷಾ (14) ಮೃತ ಬಾಲಕ.
ಶ್ರೀಷಾ 8ನೇ ತರಗತಿಯಲ್ಲಿ ಓದುತ್ತಿದ್ದು ಭಾನುವಾರ ಮನೆ ಅಂಗಳದಲ್ಲಿ ಸೀರೆಯಲ್ಲಿ ಉಯ್ಯಾಲೆ ಮಾಡಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಸೀರೆ ಬಾಲಕನ ಕುತ್ತಿಗೆಗೆ ಬಿಗಿದಿದೆ. ಆತ ಅಲ್ಲಿಯೇ ಕುಸಿದು ಬಿದ್ದಿದ್ದು ಕೂಡಲೇ ಪೋಷಕರು ಆತನನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಆತ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಇನ್ನು ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



