ವಿವಾದ ಸೃಷ್ಟಿಸಿತು ಮಂಗಳೂರು ಎಂಎಸ್‌ಇಝಡ್ ನಡೆ; ಕಾಂತಾರ ಸ್ಟೈಲಲ್ಲಿ ದೈವಾಚರಣೆ ತಡೆ ಯತ್ನ

ಮಂಗಳೂರು: ನಗರದ ಹೊರವಲಯದ ಬಜಪೆ ಗ್ರಾಮದ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನದಲ್ಲಿ ಮೊನ್ನೆ ಸಂಕ್ರಮಣ ದಿನದಂದು ನಡೆದ ದೈವರಾಧನೆಯ ಹೊತ್ತಲ್ಲಿ ಆಕ್ರೋಶ ಗರ್ಭಿತವಾಗಿ ನುಡಿದಿದೆ. ದೈವಗಳ ಆಚರಣೆ ಬಂದ್ ಮಾಡಿಸಲು ಮಂಗಳೂರು ವಿಶೇಷ ಆರ್ಥಿಕ ವಲಯ ಮುಂದಾಗಿದೆ. ಇದು ಮಂಗಳೂರಿನಲ್ಲಿ ಭಾರೀ ವಿವಾದ ಸೃಷ್ಟಿಸಿದೆ. ಎಂಎಸ್‌ಇಝಡ್ ವ್ಯಾಪ್ತಿಯಲ್ಲಿರುವ ಕಾಂತೇರಿ ಜುಮಾದಿ ದೇವಸ್ಥಾನದ ಆಚರಣೆಗೆ ತಡೆ ಆರೋಪ ಎದುರಾಗಿದೆ. 800 ವರ್ಷಗಳ ಇತಿಹಾಸವಿರುವ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನದಲ್ಲಿ ಘಟನೆ ನಡೆದಿದೆ. 2006ರಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಸಾವಿರಾರು ಎಕರೆ ಜನವಸತಿ ಜಾಗ ಸರ್ಕಾರದಿಂದ ಭೂ ಸ್ವಾಧೀನವಾಗಿತ್ತು. ಬಜ್ಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಕಳವಾರು ಗ್ರಾಮದ ಸಾವಿರಾರು ಎಕರೆ ಭೂ ಸ್ವಾಧೀನವಾಗಿದೆ. ಸಮೃದ್ಧ ಗದ್ದೆಗಳು, ಸಾವಿರಾರು ನಾಗಬನಗಳು, ಬ್ರಹ್ಮಸ್ಥಾನಗಳು, ದೈವದ ಗುಡಿಗಳು, ಕೆರೆ, ತೊರೆ, ಶಾಲೆ, ಚರ್ಚು, ಮಸೀದಿ ಹೀಗೆ ಸಾವಿರಾರು ಮನೆಗಳು ಭೂ ಸ್ವಾಧೀನಕ್ಕೆ ನೆಲಸಮಗೊಂಡಿದೆ. ಆದರೆ 800 ವರ್ಷಗಳ ಇತಿಹಾಸವಿದ್ದ ನೆಲ್ಲಿದಡಿ ಗುತ್ತಿನ ದೇವಸ್ಥಾನ ಮುಟ್ಟಲಾಗಲಿಲ್ಲ. ನೆಲ್ಲಿದಡಿ ಗುತ್ತಿನ ಪೂರ್ತಿ ಜಾಗವನ್ನು ಕಂಪನಿ ಬಲಾತ್ಕಾರದಿಂದ ತನ್ನ ಹೆಸರಿಗೆ ಬರೆಸಿಕೊಂಡರೂ ದೈವಸ್ಥಾನ ಮಟ್ಟಲಾಗಲಿಲ್ಲ. ಸದ್ಯ ಕಂಪೆನಿ ಅಧಿಕಾರಿಗಳ ನಡೆಯ ವಿರುದ್ದ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.



