ಸುಭಾಶ್ಚಂದ್ರರರು ಇನ್ನೆರಡು ವರ್ಷ ಬದುಕುಳಿದಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ – ಜಗದೀಶ್ ಕಾರಂತ್

ಬಿ.ಸಿ.ರೋಡ್ : ಭಾರತದ ಸ್ವಾಭಿಮಾನವನ್ನು ಬಡಿದ್ದೆಬ್ಬಿಸಿದ ಸಿಡಿಲ ಸಂತ ಸ್ವಾಮಿ ವಿವೇಕಾನಂದರು ಹಾಗೂ ಭಾರತದ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಹೊಸ ಮುನ್ನುಡಿಯನ್ನು ಬರೆದ ನೇತಾಜಿ ಸುಭಾಷ್ ಚಂದ್ರ ಬೋಸ್‌ರಂತಹ ಮಹಾನ್ ವ್ಯಕ್ತಿಗಳು ಪ್ರಸ್ತುತ ಕಾಲಘಟ್ಟದಲ್ಲೂ ಭಾರತದ ಯುವ ಪೀಳಿಗೆಗೆ ಪ್ರೇರಣೆ ಮತ್ತು ಸ್ಪೂರ್ತಿಯಾಗಿದ್ದಾರೆ ಎಂದು ಹಿ.ಜಾ.ವೇ.ಯ ಕ್ಷೇತ್ರೀಯ ಸಂಯೋಜಕರಾದ ಜಗದೀಶ್ ಕಾರಂತ್ ಹೇಳಿದ್ದಾರೆ.
ಇವರು ಬಿ.ಸಿ.ರೋಡಿನ ಶ್ರೀ ರಕೇಶ್ವರೀ ದೇವಸ್ಥಾನದ ಮುಂಭಾಗದಲ್ಲಿ ಹಿಂದೂ ಜಾಗರಣ ವೇದಿಕೆ, ಬಂಟ್ವಾಳ ತಾಲೂಕು,ಮಂಗಳೂರು ಗ್ರಾಮಾಂತರ ಜಿಲ್ಲೆಯ ಆಶ್ರಯದಲ್ಲಿ ಸ್ವಾಮೀ ವಿವೇಕಾನಂದ ಮತ್ತು ನೇತಾಜಿ ಸುಭಾಷ್ ಚಂದ್ರಬೋಸ್ ಅವರುಗಳ ಜನ್ಮ ಜಯಂತಿಯ ಪ್ರಯುಕ್ತ ನಡೆದ “ಹಿಂದೂ ಯುವ ಸಮಾವೇಶ”ದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಸ್ವಾಮಿ ವಿವೇಕಾನಂದರು ಅಪ್ಪಟ ರಾಷ್ಟ್ರ ಭಕ್ತರಾಗಿದ್ದರು. ದೈರ್ಯ,ಸಾಹಸ, ಪರಾಕ್ರಮ ಎಲ್ಲಾ ಸದ್ಗುಣಗಳ ಸಮುಚ್ಚಯವನ್ನು ಮೈಗೂಡಿಸಿರುವ ಕ್ರಾಂತಿಕಾರಿ ಸುಭಾಶ್ಚಂದ್ರ ಭೋಸ್ ಅವರು ಬ್ರಿಟಿಷರ ವಿರುದ್ದ ಸೇಡು ತೀರಿಸಲು ಸನ್ನದ್ದರಾಗಿದ್ದರು. ಆದರೆ ಅಹಿಂಸಾ ತತ್ವದಡಿಯಲ್ಲಿ ಮಹಾತ್ಮಗಾಂಧಿ ಮತ್ತವರ ಟೀಂ ಅಸಹಕಾರ ನೀಡಿದ್ದರಿಂದ ಇದು ಸಾಧ್ಯವಾಗಿಲ್ಲ. ಸುಭಾಶ್ಚಂದ್ರರವರು ಇನ್ನೆರಡು ವರ್ಷ ಬದುಕುಳಿದಿದ್ದರೆ ದೇಶವಿಭಜನೆಯಾಗುತ್ತಿರಲಿಲ್ಲ. ಅಂದಿನ ನಮ್ಮ ನಾಯಕತ್ವದ ದೌರ್ಬಲ್ಯದಿಂದಾಗಿಯೇ ದೇಶ ವಿಭಜನೆಯಾಗುವಂತಾಯಿತು ಎಂದು ವಿಶ್ಲೇಷಿಸಿದರು.



