ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಕೆ.ಎಂ.ಶೆಟ್ಟಿಯವರಿಗೆ ಅಭಿನಂದನೆ

ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ ನಿರ್ದೇಶಕರು ಮತ್ತು ಸಮಾಜದ ಎಲ್ಲಾ ವರ್ಗದವರನ್ನು ಪ್ರೀತಿಸಿ ಮುನ್ನಡೆಸಿದ ಮಹಾನ್ ವ್ಯಕ್ತಿ ಕರುಣಾಕರ ಎಂ ಶೆಟ್ಟಿ ವಿಕೆ ಗ್ರೂಪ್ ಆಫ್ ಕಂಪನಿಸ್ ಇದರ ಸಿಎಂಡಿ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ವಸಂತಿ ಕೆ. ಶೆಟ್ಟಿ ದಂಪತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಗೌರವಿಸಿ ಸನ್ಮಾನಿಸಿದರು.
ಕೆ ಎಂ ಶೆಟ್ಟಿಯವರು ಒಬ್ಬ ಉದಾತ್ತ ಮತ್ತು ಸಮಾಜಮುಖಿ ಚಿಂತನೆಯುಳ್ಳ ಅಪ್ರತಿಮ ಸಾಧಕ. ಇವರು ಮುಂಬೈನಲ್ಲಿ ವಿಕೆ ಗ್ರೂಪ್ ಆಫ್ ಕಂಪನಿಸ್ ಇದರ ಸಿಎಂಡಿ ಆಗಿ ಸಮರ್ಥವಾಗಿ ಮುನ್ನಡೆಸಿ ಇದೀಗ ಕರಾವಳಿ ಜನತೆಗೆ ಕೂಡ ಉದ್ಯೋಗಾವಕಾಶ ದೊರಕಲಿ ಎಂಬ ಉದ್ದೇಶದಿಂದ ಪಡುಬಿದ್ರಿ ಸಮೀಪದ ಏರ್ಮಾಳ್ ಗ್ರಾಮದಲ್ಲಿ 10 ಎಕ್ರೆ ಪ್ರದೇಶವನ್ನೂ ಬಳಕೆ ಮಾಡಿ ಪೀಠೋಪಕರಣಗಳಿಗೆ ಸಂಬಂಧಿಸಿದ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಡ್ಯಾಕ್ ವುಡ್ ಎಂಬ ಕೈಗಾರಿಕೆಯನ್ನು ಆರಂಭಿಸಿ ಸಮಾಜಕ್ಕೆ ಬೇರೆ ಬೇರೆ ರೀತಿಯ ಕೊಡುಗೆಯನ್ನು ಸಮರ್ಪಿಸಿದ್ದಾರೆ. ಕೆ ಎಂ ಶೆಟ್ಟಿಯವರ ಅಭಿವೃದ್ಧಿ ಪಥದ ಹೆಜ್ಜೆಗಳನ್ನು ಕಂಡಾಗ ಬಹಳಷ್ಟು ಸಂತೋಷವಾಗುತ್ತದೆ. ಇವರು ಜನಾನುರಾಗಿಯಾಗಿ ಒಕ್ಕೂಟಕ್ಕೂ ಅನೇಕ ಸಹಾಯ ಹಸ್ತ ನೀಡಿದ್ದಾರೆ. ಒಕ್ಕೂಟಕ್ಕೆ ಮುಂದೆಯೂ ಅವರ ಸಹಕಾರ ದೊರಕಲಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹೇಳಿದ್ದಾರೆ. ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿಯವರು ಕೈಗಾರಿಕಾ ನೀತಿ ಮತ್ತು ಸಮಾಜ ಸೇವೆಯನ್ನು ನೆನಪಿಸುತ್ತ ಕೈಗಾರಿಕೆಯು ಉತ್ತರೊತ್ತರ ಅಭಿವೃದ್ದಿ ಆಗಲಿ ಎಂದು ಹಾರೈಸಿದರು. ಒಕ್ಕೂಟದ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ಕೆಎಂ ಶೆಟ್ಟಿಯವರ ನೂತನ ಕೈಗಾರಿಕೆಗೆ ಶುಭನುಡಿಗಳನ್ನು ನೀಡಿದರು.
ಈ ಸಮಾರಂಭದಲ್ಲಿ ಒಕ್ಕೂಟದ ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಸಾಯಿನಾಥ್ ಶೆಟ್ಟಿ ಮುಂಡ್ಕೂರು ಉಪಸ್ಥಿತರಿದ್ದರು.



