ಉಡುಪಿ: ಮಲ್ಪೆಯಲ್ಲಿ ಮೀನು ಕದ್ದ ಆರೋಪದಲ್ಲಿ ಪರಿಶಿಷ್ಟ ಜಾತಿಯ ಬಂಜಾರ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿದ ಹೀನಾಯ ಕೃತ್ಯವನ್ನು ಸಮರ್ಥಿಸಿದ ಹಾಗೂ ಆಕೆಯನ್ನು ಕಳ್ಳಿಯೆಂದು ನಿಂದಿಸಿ, ಪ್ರಚೋದನಕಾರಿ ಭಾಷಣ ಮಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌ರನ್ನು ಕೂಡಲೇ ಬಂಧಿಸಬೇಕು ಮತ್ತು ಕೃತ್ಯ ಎಸಗಿದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗದ ಕರ್ನಾಟಕ ರಾಜ್ಯ ಬಂಜಾರ ಯುವಕರ ಹಾಗೂ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಆರ್.ಡಿ. ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಪೆ ಮೀನುಗಾರರ ಸಂಘ ಆಯೋಜಿಸಿದ ಸಭೆಯಲ್ಲಿ ದಲಿತ ಮಹಿಳೆಯ ಮೇಲೆ ನಡೆದ ಹಲ್ಲೆ ಕೃತ್ಯವನ್ನು ಸಮರ್ಥಿಸಿದ ಮಾಜಿ ಸಚಿವರಾದ ಕೆ.ರಘುಪತಿ ಭಟ್ ಹಾಗೂ ಪ್ರಮೋದ್ ಮಧ್ವರಾಜ್ ಬೇಷರತ್ ಆಗಿ ಕ್ಷಮೆ ಯಾಚಿಸಬೇಕು ಎಂದರು.
ಪರಿಶಿಷ್ಟ ಜಾತಿ ಬಂಜಾರ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಮೀನು ಕದ್ದ ಆರೋಪದಲ್ಲಿ ಸಾರ್ವಜನಿಕವಾಗಿ ಮರಕ್ಕೆ ಕಟ್ಟಿ ಹಾಕಿ ಥಳಿಸಿರುವುದನ್ನು ಸಮುದಾಯ ಉಗ್ರವಾಗಿ ಖಂಡಿಸುತ್ತದೆ. ಈ ಕೃತ್ಯ ಸಮಸ್ತ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಮಾ.18ರಂದು ಮಲ್ಪೆ ಬಂದರು ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಬಂಜಾರ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಒಂದೆರಡು ಕೆ.ಜಿ. ಮೀನು ತೆಗೆದ ಕಾರಣಕ್ಕಾಗಿ ಕಟ್ಟಿ ಹಾಕಿ ಥಳಿಸಿರುವುದು, ಹೀನಾಮಾನವಾಗಿ ನಿಂದಿಸಿರುವುದು ನಾಗರಿಕ ಸಮಾಜಕ್ಕೆ ಕಳಂಕ. ಇದರಿಂದ ಮಹಿಳೆಗೆ ಅವಮಾನವಾಗಿದೆ. ಆಕೆಯ ಸ್ವಾಭಿಮಾನಕ್ಕೆ, ಆತ್ಮಾಭಿಮಾನಕ್ಕೆ ಧಕ್ಕೆಯಾಗಿದೆ. ಈ ಘಟನೆಯಲ್ಲಿ ಮಹಿಳೆಯ ರಕ್ಷಣೆಗೆ ನಿಲ್ಲಬೇಕಿದ್ದ ಮಾಜಿ ಶಾಸಕರು, ಸಚಿವರು, ಹೊಟ್ಟೆಪಾಡಿಗಾಗಿ ಒಂದೆರಡು ಕೆ.ಜಿ.ಮೀನು ತೆಗೆದ ಮಹಿಳೆಯನ್ನು ರಾಜಕೀಯ ಕಾರಣಗಳಿಗಾಗಿ ದೂಷಿಸಿ, ಆಕೆಯನ್ನು ಕಳ್ಳಿಯೆಂದು ಘೋಷಿಸಿ ಅಪಮಾನಿಸಿದ್ದಾರೆ ಎಂದು ಅವರು ದೂರಿದರು.



