ಬೆಳಗಾವಿ: ಪತ್ನಿ ಎದುರೇ ಪತಿ ಮೇಲೆ ಹಲ್ಲೆ ನಡೆಸಿ ಕೊಲೆಗೈದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಟ್ಟಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಶಂಕರ ಸಿದ್ದಪ್ಪ ಜಗಮುತ್ತಿ (25) ಕೊಲೆಯಾದ ವ್ಯಕ್ತಿ. ಇಂದು ಅಮಾವಾಸ್ಯೆ ನಿಮಿತ್ತ ವಡೇರಟ್ಟಿ ಗ್ರಾಮದ ಬಾಣಸಿದ್ದೇಶ್ವರ ದೇವಸ್ಥಾನಕ್ಕೆ ಪತ್ನಿ ಪ್ರಿಯಾಂಕಾ ಅವರೊಂದಿಗೆ ಆಗಮಿಸಿದ್ದ ವೇಳೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಶಂಕರ್ ಮದುವೆಯಾಗಿದ್ದರು. ಇಂದು ದೇವಸ್ಥಾನಕ್ಕೆ ಬಂದಾಗ ಪತ್ನಿಯ ಮುಂದೆಯೇ ದುಷ್ಕರ್ಮಿಗಳು ಲಾಂಗುಗಳಿಂದ ಮನಬಂದಂತೆ ಹಲ್ಲೆ ಮಾಡಿ ಕೊಲೆಗೈದಿದ್ದಾರೆ. ಪತ್ನಿ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಪತಿಯ ಹತ್ಯೆಯನ್ನು ಕಣ್ಣಾರೆ ಕಂಡ ಪ್ರಿಯಾಂಕಾ ಪ್ರತಿಕ್ರಿಯಿಸಿ, ನಿನ್ನೆ ತಡರಾತ್ರಿ ನನ್ನ ಪತಿ ನನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇಂದು ಬೆಳಗ್ಗೆ ನನ್ನನ್ನು ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದರು. ಬೈಕ್ ತಿರುಗಿಸಿಕೊಂಡು ಬರ್ತಾರೆ ಅಂತ ನಾನು ಮುಂದೆ ಹೋಗಿ ನಿಂತುಕೊಂಡಿದ್ದೆ. ಅಷ್ಟರಲ್ಲಿ ಲಾಂಗ್ ಹಿಡಿದುಕೊಂಡು ಬಂದ ಒಬ್ಬ ವ್ಯಕ್ತಿ ಗಂಡನ ಮೇಲೆ ಹಲ್ಲೆ ಮಾಡಿ ಪರಾರಿಯಾದ. ನಾನು ಓಡಿ ಹೋಗುವಷ್ಟರಲ್ಲಿ ಅವರು ಕೆಳಗೆ ಬಿದ್ದಿದ್ದರು” ಎಂದು ಘಟನೆಯನ್ನು ವಿವರಿಸಿದರು. “ಮದುವೆಯಾಗಿ ಇದೇ 19ನೇ ತಾರೀಕಿಗೆ ನಾಲ್ಕು ತಿಂಗಳು ಪೂರ್ಣವಾಗುತ್ತಿತ್ತು” ಎಂದು ಅವರು ಕಣ್ಣೀರು ಸುರಿಸಿದರು. ಮೂಡಲಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



