ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಸುರಕ್ಷಿತ ಆಹಾರ ಮಾರಾಟ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಸಂಗ್ರಹಿಸಿದ ಮಾದರಿಯ ಪರೀಕ್ಷಾ ವರದಿ. ಸ್ಯಾಂಪಲ್ ಪರಿಶೀಲನೆ ವೇಳೆ ನಗರದಲ್ಲಿ ಮಾರಾಟವಾಗುವ ವಿವಿಧ ಆಹಾರದಲ್ಲಿ ಕ್ಯಾನ್ಸರ್ ಅಂಶ ಪತ್ತೆಯಾಗಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.

ರಾಜಧಾನಿಯಲ್ಲಿ ದಾಳಿ ಮುಂದುವರಿಸಿದ ಅಧಿಕಾರಿಗಳಿಗೆ ಸಿಹಿ ತಿಂಡಿಗಳಲ್ಲೂ ಕ್ಯಾನ್ಸರ್ ಅಂಶ ಇರುವುದು ತಿಳಿದು ಬಂದಿದೆ. ಜನರನ್ನು ಆಕರ್ಷಿಸಲು ಬೇಕರಿ ಹಾಗೂ ಹೋಟೆಲ್‌ಗಳಲ್ಲಿ ರಾಸಾಯನಿಕ ಬಣ್ಣವನ್ನು ಬಳಸಿ ಸಿಹಿ ತಿಂಡಿಗಳನ್ನು ತಯಾರಿಸಲಾಗುತ್ತದೆ. ಈ ಬಣ್ಣ ಆರೋಗ್ಯಕ್ಕೆ ಹಾನಿಕಾರಕ ಎಂದು ಪರಿಶೀಲನೆಯಿಂದ ತಿಳಿದು ಬಂದಿದೆ. ವಿಶೇಷವಾಗಿ ಬೇಕರಿಗಳಲ್ಲಿ ಸಿಗುವ ಬಗೆ ಬಗೆಯ ಬಣ್ಣದ ಸಿಹಿ ತಿಂಡಿಗಳಲ್ಲಿ ಬಳಸುವ ರಾಸಾಯನಿಕ ಬಣ್ಣದಲ್ಲಿ ಕ್ಯಾನರ್ ಅಂಶ ಇರುವುದು ಗೊತ್ತಾಗಿದೆ. ಅಷ್ಟೇ ಅಲ್ಲದೆ ಇದರಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದು ಇದರಿಂದ ಡಯಾಬಿಟಿಸ್ ಬರುವ ಸಾಧ್ಯತೆ ಇದೆ. ಹೀಗಾಗಿ ತಿನ್ನಲು ಯೋಗ್ಯವಲ್ಲದ ಸಿಹಿ ತಿಂಡಿಗಳ ಮಾರಾಟ ಮಳಿಗೆಗಳಿಗೆ ಆಹಾರ ಇಲಾಖೆ ನೋಟೀಸ್ ನೀಡಿದೆ. ಅಲ್ಲದೆ ಸ್ವಚ್ಚತೆ ಇಲ್ಲದ, ಕಲಬೆರೆಕೆ ಮಾಡುವ, ಪರವಾನಿಗೆ ಪಡೆಯದ ಬೇಕರಿ ಹಾಗೂ ಅಂಗಡಿಗಳಿಗೆ ಆಹಾರ ಇಲಾಖೆ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ಸಿಹಿ ತಿಂಡಿಗಳ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ಮೈಸೂರು ಪಾಕ್, ಮಿಕ್ಸ್ಚರ್, ಜಿಲೇಬಿ, ಜಹಂಗೀರ್‌ನಲ್ಲಿ ಕೃತಕ ಬಣ್ಣ ಬಳಕೆ ಮಾಡಿರುವುದು ಗೊತ್ತಾಗಿದೆ. ಅಲ್ಲದೆ ಈ ಸಿಹಿ ತಿಂಡಿಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುವುದು ಪರಿಶೀಲನೆಯಿಂದ ತಿಳಿದು ಬಂದಿದೆ. ಇದರ ಬೆನ್ನೆಲ್ಲೆ ಹಲವೆಡೆ ದಾಳಿ ನಡೆಸಿ ಮಾದರಿ ಸಂಗ್ರಹಿಸಿ ಪರಿಶೀಲನೆಗೆ ಕಳುಹಿಸಲಾಗಿದೆ. ಈ ಪರೀಕ್ಷಾ ವರದಿಯಲ್ಲಿ ಕೆಲ ಸಿಹಿ ತಿಂಡಿಗಳು ತಿನ್ನಲು ಯೋಗ್ಯವಾಗಿಲ್ಲ. ಈ ಸ್ವೀಟ್‌ಗಳಲ್ಲಿ ಕಲಬೆರೆಕೆ, ಕಲರಿಂಗ್ ಬಳಕೆ ಮಾಡಲಾಗಿದೆ. ಇದರ ಸೇವನೆಯಿಂದ ಕ್ಯಾನ್ಸರ್, ಡಯಾಬಿಟಿಸ್‌ಗೆ ಕಾರಣವಾಗುವ ಅಂಶ ದೇಹ ಸೇರುತ್ತದೆ ಎಂದು ಎಚ್ಚರಿಸಲಾಗಿದೆ.
ಸ್ವೀಟ್ಸ್‌ಗಳಲ್ಲಿ ಬಳಕೆ ಮಾಡುವ ಕಲರ್ ಕ್ಯಾನ್ಸರ್ ಮಾತ್ರವಲ್ಲದೆ, ಹೆಪಟೈಟಿಸ್, ಡಯಾಬಿಟಿಸ್ ಗೆ ಕಾರಣವಾಗುತ್ತದೆ ಎಂದು ಆಹಾರ ತಜ್ಞರು ಹೇಳಿದ್ದಾರೆ. ಮಿಕ್ಸ್ಚರ್ ಹಾಗೂ ಜಿಲೇಜಿ ತಯಾರಿಕೆಯಲ್ಲಿ ಬಳಕೆ ಮಾಡುವ ಹಳದಿ ಬಣ್ಣ ಕ್ಯಾನ್ಸರ್ ಕಾರಕ ಎಂದು ತಿಳಿದು ಬಂದಿದೆ.



