ಕರಾವಳಿಯಾದ್ಯಂತ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ರಂಜಾನ್ ಹಬ್ಬ ಆಚರಿಸಲು ಈಗಾಗಲೇ ಸಿದ್ಧತೆ ಆರಂಭವಾಗಿದೆ.

ರಂಜಾನ್ ಹಬ್ಬ ಆಚರಣೆಗೆ ಇನ್ನು ಎರಡ್ಮೂರು ದಿನ ಬಾಕಿ ಇದೆ. ಕರಾವಳಿ ನಗರದಲ್ಲಿ ಹಬ್ಬದ ಸಿದ್ಧತೆ ಭರದಿಂದ ಸಾಗಿದೆ. ಖರೀದಿ ಭರಾಟೆಯೂ ಜೋರಾಗಿದೆ. ಅಲ್ಲದೆ, ಅಂಗಡಿಗಳಲ್ಲಿ ರಂಜಾನ್ ಹಬ್ಬದ ರಿಯಾಯ್ತಿ ದರವೂ ನೀಡಲಾಗುತ್ತಿದೆ.
ಮಂಗಳೂರು ಪೇಟೆಯೆಲ್ಲೆಡೆ ರಂಜಾನ್ ಶಾಪಿಂಗ್‌ಗಾಗಿ ಕೆಲ ಅಂಗಡಿಗಳು ತಲೆ ಎತ್ತಿವೆ. ಮಹಿಳೆಯರು ಬಟ್ಟೆ, ಸೌಂದರ್ಯ ವರ್ಧಕ, ಮೆಹೆಂದಿ, ಬಳೆ, ವಿಧ ವಿಧವಾದ ಕಿವಿಯೋಲೆ, ಮುತ್ತುಗಳಿಂದ ಮಾಡಿರುವ ಬಳೆ ಇನ್ನಿತರ ವಸ್ತುಗಳನ್ನು ಖರೀದಿಸಿ ಹಬ್ಬಕ್ಕೆ ತಯಾರಾಗುತ್ತಿದ್ದಾರೆ.
ಕೆಲ ಅಂಗಡಿಗಳಲ್ಲಿ ಹಬ್ಬದ ಖರೀದಿಗಾಗಿ ಮುಸ್ಲಿಮರು ಕುಟುಂಬ ಸಮೇತ ಬಂದು ಸಂಭ್ರಮಿಸುತ್ತಿದ್ದಾರೆ. ಪುರುಷರು ಹಬ್ಬಕ್ಕಾಗಿ ಹೊಸಬಟ್ಟೆ, ಟೋಪಿ, ಕರವಸ್ತ್ರ, ಸುಗಂಧ ದ್ರವ್ಯ, ಖರೀದಿಯಲ್ಲಿ ಬ್ಯುಸಿ ಆಗಿದ್ದಾರೆ.
ಬಟ್ಟೆ ಅಂಗಡಿಗಳಲ್ಲಿ ಚಿಣ್ಣರು, ಮಹಿಳೆಯರು ಬಟ್ಟೆ ಖರೀದಿಸುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ.
ಹಬ್ಬಕ್ಕಾಗಿ ವಿಶೇಷ ಬಣ್ಣದ ಬಟ್ಟೆಗಳು ಮಾರುಕಟ್ಟೆಗೆ ಬಂದಿದ್ದು, ಮಕ್ಕಳಿಗೆ ವಿಶೇಷ ವಿನ್ಯಾಸದ ಫ್ರಾಕ್ ಮತ್ತು ಬಟ್ಟೆಗಳ ಮೇಳದ ಸ್ಟಾಲ್ ಅಲ್ಲಲ್ಲಿ ಕಂಗೊಳಿಸುತ್ತಿದೆ.



