ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮಹತ್ವದ ಸಾಧನೆಯೊಂದನ್ನು ಮಾಡಿದೆ. ಉಡಾವಣಾ ವಾಹನವಾದ ಮಾರ್ಕ್-3 ರ ಬೂಸ್ಟರ್ ಹಂತಕ್ಕೆ ಶಕ್ತಿ ತುಂಬಲು ದ್ರವರೂಪದ ಆಮ್ಲಜನಕ ಅಥವಾ ಕೆರೋಸೀನ್ ಬಳಸುವ ಸೆಮಿ-ಕ್ರಯೋಜೆನಿಕ್ ಎಂಜಿನನ್ನು ಅಭಿವೃದ್ಧಿಪಡಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.

ಇದರ ಪರೀಕ್ಷೆಯನ್ನು ಶುಕ್ರವಾರ ನಡೆಸಲಾಗಿದ್ದು, ಈ ವೇಳೆ 2.5 ಸೆಕೆಂಡುಗಳ ಕಾಲ ಸುಗಮ ದಹನ ಮತ್ತು ಬೂಸ್ಟ್‌ಸ್ಟ್ರಾಪ್ ಮೋಡ್ ಕಾರ್ಯಾಚರಣೆಯನ್ನು ಎಂಜಿನ್ ಪ್ರದರ್ಶಿಸಿರುವುದಾಗಿ ಇಸ್ರೋ ತಿಳಿಸಿದೆ.
ಈ ಮೂಲಕ ಪ್ರೀ-ಬರ್ನರ್, ಟರ್ಬೋ ಪಂಪ್, ಆರಂಭಿಕ ವ್ಯವಸ್ಥೆ ಮತ್ತು ನಿಯಂತ್ರಣ ಉಪಕರಣಗಳಂತಹ ನಿರ್ಣಾಯಕ ಉಪವ್ಯವಸ್ಥೆಯ ಸಮಗ್ರ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗಿದೆ. ಈ ಸಂಬಂಧ ಇನ್ನೂ ಅನೇಕ ಪರೀಕ್ಷೆಗಳು ನಡೆಯಲಿವೆ.
2 ಸಾವಿರ ಕಿಲೋನ್ಯೂಟನ್‌ನಷ್ಟು ಥ್ರಸ್ಟ್ ನೀಡುವ ಸೆಮಿ-ಕ್ರಯೋಜೆನಿಕ್ ಎಂಜಿನ್ ಅನ್ನು ಭವಿಷ್ಯದ ಉಡಾವಣಾ ವಾಹನಗಳ ಪೇಲೋಡ್‌ಗಳನ್ನು ಉತ್ತಮಗೊಳಿಸಲು ಮತ್ತು ಬೂಸ್ಟರ್ ಹಂತಗಳಿಗೆ ಶಕ್ತಿ ತುಂಬಲು ಬಳಸಲಾಗುತ್ತದೆ. ಇದರಿಂದ ಪೇಲೋಡ್‌ನ ಸಾಮರ್ಥ್ಯ 4 ಟನ್‌ನಿಂದ 5 ಟನ್‌ಗೆ ಹೆಚ್ಚಳವಾಗಲಿದೆ.
ಸೆಮಿ-ಕ್ರಯೋಜೆನಿಕ್ ಎಂಜಿನ್ ಅನ್ನು ಮೊದಲ ಬಾರಿ ಮಾ.28ರಂದು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು.



