ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮನೆಯಲ್ಲಿ ಮಲಗಿದ್ದ ಭಾರತೀಯ ವಾಯುಪಡೆಯ ಸಿವಿಲ್ ಎಂಜಿನಿಯರ್ ಮೇಲೆ ಅಪರಿಚಿತ ದುಷ್ಕರ್ಮಿಯೊಬ್ಬ ಕಿಟಕಿಯಿಂದಲೇ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಶನಿವಾರ ನಡೆದಿದೆ. ವಾಯುಪಡೆಯ ಸಿವಿಲ್ ಎಂಜಿನಿಯರ್ ಎಸ್.ಎನ್.ಮಿಶ್ರಾ(51) ಹತ್ಯೆಗೀಡಾದವರು.

ಪ್ರಯಾಗ್‌ರಾಜ್‌ನ ಕಂಟೋನ್ಮೆಂಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಮಿಶ್ರಾ ಮಲಗಿದ್ದಾಗ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿ ಕಿಟಕಿಯಿಂದ ಗುಂಡು ಹಾರಿಸಿದ್ದಾನೆ. ಈ ಸಂದರ್ಭದಲ್ಲಿ ಅವರ ಎದೆಗೆ ಗುಂಡು ತಗುಲಿದೆ. ತಕ್ಷಣವೇ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಎಸ್.ಎನ್.ಮಿಶ್ರಾ ಮೃತಪಟ್ಟಿದ್ದಾರೆ. ಎಂಜಿನಯರ್ಸ್ ಕಾಲೋನಿಯ ಗಡಿ ದಾಟಿ ವ್ಯಕ್ತಿಯೊಬ್ಬ ಬರುತ್ತಿರುವ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಗುಂಡು ಹಾರಿಸಿದವನ ಪತ್ತೆಗೆ ತನಿಖೆ ಮುಂದುವರೆಸಿದ್ದಾರೆ.



