ಭಾರೀ ವಿರೋಧದ ನಡುವೆಯೂ ವಕ್ಫ್ ತಿದ್ದುಪಡಿ ಮಸೂದೆ ಸಂಸತ್ನಲ್ಲಿ ಅಂಗೀಕಾರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಲೋಕಸಭೆ ಬಳಿಕ, ರಾಜ್ಯಸಭೆಯಲ್ಲೂ ಮಹತ್ವದ ಮಸೂದೆ ಅಂಗೀಕಾರಗೊಂಡಿದೆ.

ಲೋಕಸಭೆಯಲ್ಲಿ ಏಪ್ರಿಲ್ 2ರಂದು ಅಂಗೀಕೃತಗೊಂಡಿತ್ತು. ಏಪ್ರಿಲ್ 3 ರಂದು ಮಧ್ಯರಾತ್ರಿಯವರೆಗೆ ರಾಜ್ಯಸಭೆಯಲ್ಲಿ ಚರ್ಚೆಗಳು ನಡೆದಿದ್ದವು. ದಿನವಿಡೀ ನಡೆದ ಚರ್ಚೆಯ ನಂತರ ಕೇಂದ್ರ ಸಚಿವ ಕಿರಣ್ ರಿಜುಜು ಮತ್ತಷ್ಟು ಸ್ಪಷ್ಟನೆಗಳನ್ನು ನೀಡಿದರು. ಬಳಿಕ 1.30ರ ಸುಮಾರಿಗೆ ಮತದಾನಕ್ಕೆ ಹಾಕಲಾಯಿತು. ಬಳಿಕ 2.30 ಹೊತ್ತಿಗೆ ಮತದಾನದ ಫಲಿತಾಂಶವನ್ನು ರಾಜ್ಯಸಭೆಯ ಸಭಾಪತಿಗಳಾದ ಧನ್ಕರ್ ಅವರು ಪ್ರಕಟಿಸಿ, ಮಸೂದೆಯು ಪಾಸ್ ಆಗಿರುವುದಾಗಿ ಘೋಷಿಸಿದರು. ಡಿವಿಷನ್ ಆಧಾರದಲ್ಲಿ ನಡೆದ ಮತದಾನದಲ್ಲಿ ಮಸೂದೆಯ ಪರವಾಗಿ 128 ಮತಗಳು ಬಂದರೆ, ವಿರುದ್ಧವಾಗಿ 95 ಮತಗಳು ಬಂದವು.



