ಉಪ್ಪಿನಂಗಡಿ ವಳಾಲ್ ಭಗವಾನ್ ೧೦೦೮ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನಮಂದಿರದ ಜೀರ್ಣೋದ್ಧಾರದ ಪ್ರಯುಕ್ತ ಮೂಡಬಿದ್ರಿ ಸ್ವಸ್ತಿ ಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದೊಂದಿಗೆ ಬೆಳ್ತಂಗಡಿಯ ಪ್ರತಿಷ್ಟ ಪುರೋಹಿತರಾದ ಜಯರಾಜ ಇಂದ್ರ ಅವರ ನೇತೃತ್ವದಲ್ಲಿ ಕಲ್ಯಾಣ ಮಂದಿರ ಆರಾಧನೆ ನಡೆಯಿತು.

ಈ ಸಂದರ್ಭ ಜಿನ ಮಂದಿರದ ಜೀರ್ಣೋದ್ಧಾರ ಮಾಡುವ ಸಂಕಲ್ಪವನ್ನು ಮಾಡಿ ಬಾಲಾಲಯಕ್ಕೆ ಮುಹೂರ್ತ ಮಾಡಲಾಯಿತು. ಸ್ವಾಮೀಜಿಯವರು ಮಾತನಾಡಿ, ಬಸದಿಯ ಜೀರ್ಣೋದ್ಧಾರ ವನ್ನು ಎಲ್ಲರೂ ಒಗ್ಗಟ್ಟಿನಿಂದ ಒಳ್ಳೆಯ ಮನಸ್ಸಿನಿಂದ ಅತಿ ಶೀಘ್ರದಲ್ಲಿ ಮಾಡಬೇಕು. ಈ ಪ್ರದೇಶದ ಎಲ್ಲಾ ಬಂಧುಗಳು ಜೀರ್ಣೋದ್ಧಾರಕ್ಕೆ ಸಹಕರಿಸಬೇಕು ಹಾಗೂ ಶ್ರೀ ಜೈನ ಮಠ ಮೂಡುಬಿದಿರೆಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಸಂಪೂರ್ಣ ಸಹಕಾರವನ್ನು ಪಡೆದುಕೊಳ್ಳಬೇಕೆಂದು ಸ್ವಾಮೀಜಿಯವರು ಆಶೀರ್ವಾದ ಪೂರಕ ಆದೇಶವನ್ನು ನೀಡಿದರು.
ಸಮಿತಿಯ ಎಲ್ಲಾ ಪದಾಧಿಕಾರಿಗಳು, ಬಂಧುಗಳು ಹಾಗೂ ಊರಿನ ಭಕ್ತಾದಿಗಳು ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಎಲ್ಲಾ ಕೆಲಸ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.



