ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿ ಬಿದ್ದು ಬಳಿಕ ಕಾಲೇಜಿನ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಿರಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಿರಿನಗರ ನಿವಾಸಿ ಆದಿತ್ಯ ಪ್ರಭು (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಮೂಲತಃ ಮಂಗಳೂರಿನವರಾದ ಆದಿತ್ಯ ಪ್ರಭು ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಬ್ರಿಗೇಡ್ ಅಪಾರ್ಟ್‌ಮೆಂಟ್‌ನಲ್ಲಿ ಪೋಷಕರೊಂದಿಗೆ ವಾಸವಾಗಿದ್ದು, ಹೊಸ್ಕೆರೆ ಹಳ್ಳಿ ಸಮೀಪದ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಟೆಕ್ ಎರಡನೇ ಸೆಮಿಸ್ಟರ್ ಓದುತ್ತಿದ್ದರು. ಸೋಮವಾರ ಪರೀಕ್ಷೆ ನಡೆಯುತ್ತಿದ್ದ ವೇಳೆ ಮೊಬೈಲ್ ಮೂಲಕ ನಕಲು ಮಾಡುತ್ತಿದ್ದುದನ್ನು ಗಮನಿಸಿದ ಶಿಕ್ಷಕರು ಕೊಠಡಿಯಿಂದ ಹೊರಗೆ ಕರೆತಂದು ಕಾಲೇಜು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾಲೇಜಿಗೆ ಬರುವಂತೆ ಪೋಷಕರಿಗೆ ಆಡಳಿತ ಮಂಡಳಿ ಹೇಳಿದ್ದು, ಬೇಸರಗೊಂಡು 9ನೇ ಮಹಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



