ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣದಲ್ಲಿ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್ನಲ್ಲಿ ನಡೆದಿದೆ. ಮಹಾರಾಷ್ಟ್ರದ ಕಲ್ಯಾಣ್ನಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿಶಾಲ್ ಗಾವ್ಲಿ ಭಾನುವಾರ ಬೆಳಗ್ಗೆ ತಲೋಜಾ ಜೈಲಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಮೂರು ತಿಂಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದ ಆರೋಪಿ ತಲೋಜಾ ಕೇಂದ್ರ ಕಾರಾಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೈಲು ಅಧಿಕಾರಿಗಳ ಪ್ರಕಾರ, ಗಾವ್ಲಿ ಹಿಂದಿನ ಸಂಜೆ ಊಟ ಮಾಡಿದ್ದ ಮತ್ತು ಬೆಳಗಿನ ಜಾವ 3.30 ರ ಸುಮಾರಿಗೆ ಶೌಚಾಲಯಕ್ಕೆ ಹೋಗುತ್ತಿರುವುದು ಕಂಡುಬಂದಿದೆ.
ಬೆಳಗಿನ ಜಾವ 4.00 ಗಂಟೆಯ ಸುಮಾರಿಗೆ ಮತ್ತೊಬ್ಬ ಕೈದಿ ಜೈಲಿನ ಶೌಚಾಲಯದಲ್ಲಿ ಈತ ನೇಣುಹಾಕಿಕೊಂಡಿರುವುದನ್ನು ಕಂಡು ಕೂಡಲೇ ಅಧಿಕಾರಿಗಳಿಗೆ ತಿಳಿಸಿದ್ದಾರೆ. ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆ ಕಳುಹಿಸಲಾಯಿತು. ಡಿಸೆಂಬರ್ 2024 ರಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಾವ್ಲಿ ವಿಚಾರಣೆ ಎದುರಿಸುತ್ತಿದ್ದ. ಪತ್ನಿ ಸಾಕ್ಷಿ ಗಾವ್ಲಿ ಅಪರಾಧಕ್ಕೆ ಸಾಕ್ಷಿಯಾಗಿದ್ದಳು.



