ಸ್ನಾನ ಮಾಡಲು ಹೋಗಿ ಈಜುಬಾರದೇ ನೀರಿನಲ್ಲಿ ಮುಳುಗಿದ ಯುವಕನನ್ನು ಕಾಪಾಡಲು ಹೋಗಿ ಸೈನಿಕ ಸೇರಿ ಇಬ್ಬರೂ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಣೇರಿ ಗ್ರಾಮದ ಹತ್ತಿರ ಮಲಪ್ರಭಾ ನದಿಯಲ್ಲಿ ನಡೆದಿದೆ.

ತಾಲೂಕಿನ ಹಂಸನೂರ ಗ್ರಾಮದ ಶೇಖಪ್ಪ ಮುತ್ತಪ್ಪ ಮೂಲಿಮನಿ (15) ಹಾಗೂ ಗದಗ ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದ ಸೈನಿಕ ಮಹಾಂತೇಶ ಹೂವಪ್ಪ ಹೊಸಮನಿ (25) ಮೃತಪಟ್ಟವರು. ಶೇಖಪ್ಪ ಮುತ್ತಪ್ಪ ಮೂಲಿಮನಿ ಎಂಬುವರು ಮಣೇರಿ ಗ್ರಾಮದ ಹತ್ತಿರದ ಮಲಪ್ರಭಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ, ಈಜುಬಾರದೇ ರಕ್ಷಣೆಗಾಗಿ ಕೂಗಿಕೊಂಡರು. ಆಗ ಅಲ್ಲಿಯೇ ಸಮೀಪದಲ್ಲಿದ್ದ ಬೆನಹಾಳ ಗ್ರಾಮದ ಸೈನಿಕ ಮಹಾಂತೇಶ ಹೂವಪ್ಪ ಹೊಸಮನಿ ಅವರು ಮಲಪ್ರಭಾ ನದಿಯಲ್ಲಿ ಈಜಿ, ಮೂಲಿಮನಿಯನ್ನು ರಕ್ಷಿಸಲು ಮುಂದಾದರಾದರೂ, ಸಾಧ್ಯವಾಗದೆ ಇಬ್ಬರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.



