ಸಿಎಂ ಸಿದ್ದರಾಮಯ್ಯ ಸರಕಾರದ ಗ್ಯಾರಂಟಿ ಯೋಜನೆಯಿಂದ ಕರ್ನಾಟಕದವರಿಗೆ ಸಾಕಷ್ಟು ಉಪಕಾರಿಯಾಗಿದೆ. ಕೇಂದ್ರ ಸರಕಾರ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ದರ ಕಡಿಮೆ ಮಾಡಬೇಕು. ಇದನ್ನು ಏರಿಸಿದ ಕಾರಣವೇ ಇಂದು ಬೆಲೆ ಏರಿಕೆ ಸಂಭವಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ MLC ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂಧನ ದರವನ್ನು ಏರಿಸಿದ ಕೇಂದ್ರ ಸರಕಾರದ ವಿರುದ್ಧ ಜನಾಕ್ರೋಶ ಧರಣಿ ಮಾಡುವ ಬದಲು ರಾಜ್ಯ ಸರಕಾರದ ವಿರುದ್ಧ ಜನಾಕ್ರೋಶ ಧರಣಿಯನ್ನು ಮಾಡುತ್ತಾ ಇದ್ದೀರಿ. ಇಂದು ಬೆಲೆ ಏರಿಕೆ ಸಂಭವಿಸಿದರೆ ಅದಕ್ಕೆ ಕೇಂದ್ರದಲ್ಲಿರುವ ಬಿಜೆಪಿ ಸರಕಾರವೇ ನೇರ ಹೊಣೆ ಹೊರಬೇಕು. ಒಂದು ಲೀಟರ್ ಪೆಟ್ರೋಲ್ ಬೆಲೆಯ 60 ರೂ. ಸುಂಕ, ಡೀಸೆಲ್ ನ 47 ರೂ. ಸುಂಕ ನೇರವಾಗಿ ಕೇಂದ್ರ ಸರಕಾರಕ್ಕೆ ಹೋಗುತ್ತಿದೆ. ಇದನ್ನು ಮೊದಲು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಪರ ನೀತಿಯನ್ನು ಜಾರಿಗೆ ತರದೆ ರೈತ ವಿರೋಧಿ ಕಾನೂನನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ಬಿಜೆಪಿ ಸರಕಾರದ ನೀತಿಯನ್ನು ಖಂಡಿಸಿ ಬೆಂಗಳೂರಿನಲ್ಲಿ ಏಪ್ರಿಲ್ 17 ರಂದು ಜನಾಕ್ರೋಶ ಧರಣಿಯನ್ನು ಕಾಂಗ್ರೆಸ್ ಸರಕಾರ ಹಮ್ಮಿಕೊಂಡು ನಂತರ ಕರ್ನಾಟಕದಾದ್ಯಂತ ವಿಸ್ತರಣೆ ಮಾಡಲಾಗುವುದೆಂದು ತಿಳಿಸಿದರು.



