‘ಹುಬ್ಬಳ್ಳಿಯಲ್ಲಿ ಪುಟ್ಟ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದಡಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿರುವ ಬಿಹಾರದ ರಿತೇಶ್ ಕುಮಾರ್ ಮೃತದೇಹವನ್ನು ಮುಂದಿನ ತನಿಖೆಗೆ ಲಭ್ಯವಾಗುವಂತೆ ಸುಡದೇ ಸಮಾಧಿ ಮಾಡಲಾಗುವುದು’ ಎಂದು ರಾಜ್ಯ ಸರ್ಕಾರ, ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತು, ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್–ಕರ್ನಾಟಕ’ (ಪಿಯುಸಿಎಲ್) ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದ ಚಿಕ್ಕಬಳ್ಳಾಪುರದ ಇ.ಶುಜಾಯುತ್ ಉಲ್ಲಾ ಮತ್ತು ಬೆಂಗಳೂರಿನ ಮಧುಭೂಷಣ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ವಕೀಲ ಜನರಲ್ ಕೆ.ಶಶಿಕಿರಣ ಶೆಟ್ಟಿ, ‘ಇಂತಹ ಪ್ರಕರಣಗಳಲ್ಲಿ ಮೃತದೇಹವನ್ನು ಸುಡುವುದಿಲ್ಲ. ಮುಂದಿನ ತನಿಖೆಗೆ ಅನುಕೂಲವಾಗುವಂತೆ ಸಮಾಧಿ ಮಾಡಲಾಗುವುದು’ ಎಂದು ತಿಳಿಸಿದರು.
ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಂಪೂರ್ಣ ವಿವರ ಒದಗಿಸಿ’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
PILನಲ್ಲಿ ಪೊಲೀಸರು ತಾವೇ ಸ್ವತಃ ನ್ಯಾಯಾಧೀಶರಾಗಿ, ಈ ರೀತಿ ನ್ಯಾಯ ದಂಡನೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ, ಬಾಲಕಿ ಮತ್ತು ಎನ್‌ಕೌಂಟರ್‌ಗೆ ಗುರಿಯಾಗಿರುವ ವ್ಯಕ್ತಿಯ ಮೃತದೇಹಗಳನ್ನು ಸಂರಕ್ಷಿಸಿ ಇರಿಸಬೇಕು. ಶವಪರೀಕ್ಷೆಗಾಗಿ ದೆಹಲಿ ಅಥವಾ ಕರ್ನಾಟಕ ಹೊರತುಪಡಿಸಿದ ಅನ್ಯ ರಾಜ್ಯಗಳ ಶಸ್ತ್ರಚಿಕಿತ್ಸಕರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ಸ್ವತಂತ್ರವಾದ ವಿಶೇಷ ತನಿಖಾ ತಂಡ ರಚನೆ ಮಾಡಬೇಕು. ಈ ತನಿಖಾ ತಂಡವು ಕೋರ್ಟ್ ನಿಗಾದಲ್ಲಿ ಇರುವಂತೆ ಆದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.



