ಬೆಂಗಳೂರು: ಮದ್ಯಪಾನ ಚಟಕ್ಕೆ ದಾಸನಾಗಿದ್ದ ಮಗನನ್ನ ತಾಯಿಯೊಬ್ಬಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ಸೋಮವಾರ ನಡೆದಿದೆ. ಚಾಂದ್ ಭಾಷಾ ಕೊಲೆಯಾದ ವ್ಯಕ್ತಿ ಆತನ ತಾಯಿ ಸೋಫಿಯಾಳನನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿ ದಿನ ಕುಡಿದು ಬಂದು ಮನೆಯವರ ಮೇಲೆ ಹಲ್ಲೆ ಮಾಡುತ್ತಿದ್ದ ಚಾಂದ್ ಪಾಷಾನ ಉಪಟಳದಿಂದ ಬೇಸತ್ತಿದ್ದ ಆತನ ಪತ್ನಿ ಬಿಟ್ಟು ಹೋಗಿದ್ದಳು. ಹೀಗಾಗಿ ಪಾಷಾ ತನ್ನ ತಾಯಿ ಜೊತೆ ವಾಸವಾಗಿದ್ದ. ಸೋಮವಾರ ಕುಡಿದುಕೊಂಡು ಬಂದು ತಾಯಿ ಜೊತೆ ಗಲಾಟೆ ಮಾಡಿದ್ದನು. ಬಳಿಕ ಸಂಜೆ 4:45ರ ಸುಮಾರಿಗೆ ಮತ್ತೆ ಕಂಠಪೂರ್ತಿ ಕುಡಿದು ಬಂದು ಮನೆಯ ಹೊರಗಡೆ ಕುಳಿತಿದ್ದ.
ಸಿಟ್ಟಿಗೆದ್ದ ಆತನ ತಾಯಿ ಅವನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚುವುದಾಗಿ ಭಯಪಡಿಸಲು ಯತ್ನಿಸಿದ್ದಾಳೆ. ಈ ವೇಳೆ ಮಾತಿಗೆ ಮಾತು ಬೆಳೆದಾಗ ಬೆಂಕಿ ಹಚ್ಚಿದ್ದಾಳೆ. ಪರಿಣಾಮ ಚಾಂದ್ ಪಾಷಾ ಸ್ಥಳದಲ್ಲೇ ಸುಟ್ಟು ಸಾವನ್ನಪ್ಪಿದ್ದಾನೆ. ಸದ್ಯ ಘಟನೆ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಾಯಿ ಸೋಫಿಯಾಳನ್ನು ಬಂಧಿಸಿರುವುದಾಗಿ ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.



