ಶ್ವಾಸಕೋಶದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ಮಂಗಳೂರಿನ ಕೆ. ಎಸ್. ಹೆಗ್ಡೆ ಆಸ್ಪತ್ರೆ ಉನ್ನತ ಹಂತದ ಪ್ರಗತಿಯನ್ನು ಸಾಧಿಸಿದೆ. ಅತ್ಯಂತ ಕಠಿಣ ಎಂದು ಪರಿಗಣಿಸಲಾದ ಕ್ಯಾರಿನಲ್ ರಿಸೆಕ್ಷನ್ ಸರ್ಜರಿಯನ್ನು ಮೂರು ರೋಗಿಗಳಲ್ಲಿ ಯಶಸ್ವಿಯಾಗಿ ನಿರ್ವಹಿಸಿದೆ. ಇದು ತನ್ನ ಅತ್ಯಾಧುನಿಕ ವೈದ್ಯಕೀಯ ನವೀನ್ಯತೆ ಮತ್ಯು ಶ್ರೇಷ್ಠತೆಗೆ ತನ್ನ ಬದ್ಧತೆಯನ್ನು ಸಾಬೀತು ಪಡಿಸಿದೆ ಎಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಡಾ. ಸಂದೀಪ್ ರೈ ತಿಳಿಸಿದರು.

ಮೂವರು ರೋಗಿಗಳ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ವಿವರಿಸಿದ ಕ್ಯಾನ್ಸರ್ ಸರ್ಜನ್ ಡಾ. ವಿನಯ್ ಮಾತನಾಡಿ ಥೋರಸಿಕ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ಕ್ಯಾರಿನಲ್ ರಿಸೆಕ್ಷನ್ ತಾಂತ್ರಿಕವಾಗಿ ಅತ್ಯಂತ ಕಠಿಣವಾಗಿರುತ್ತದೆ. ಅಂತಹ ಒಂದು ಕಠಿಣ ಶಸ್ತ್ರ ಚಿಕಿತ್ಸೆಯನ್ನು ನಿರ್ವಹಿಸಲು ಅಪಾರ ಯೋಜನೆ, ನಿಖರತೆ, ಮತ್ತು ಬಹುವಿಭಾಗಗಳ ಪರಿಣತಿಯ ಅಗತ್ಯವಿರುತ್ತದೆ. ಕಡಿಮೆ ಅವಧಿಯಲ್ಲಿ 3 ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮುಗಿಸಿರುವುದು ನಮ್ಮ ತಂಡಕ್ಕೆ ಹೆಮ್ಮೆಯ ಕ್ಷಣವಾಗಿದೆ ಮತ್ತು ನಮ್ಮ ಆಸ್ಪತ್ರೆಯ ಮುಂದುವರಿದ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ ಎಂದರು.
ಈ ಪತ್ರಿಕಾಗೋಷ್ಟಿಯಲ್ಲಿ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಡಾ. ಸಂದೀಪ್ ರೈ, ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಮೆಡಿಕಲ್ ಸೂಪರಿಂಡೆಂಟ್ ಡಾ. ಸುಮಲತಾ ಆರ್. ಶೆಟ್ಟಿ, ಇಂಟೆರ್ ವೆನ್ಷನಲ್ ಪಲ್ಮಾನಲಾಜಿಸ್ಟ್ ಡಾ. ಗಿರಿಧರ್ ಬಿ. ಎಚ್., ಅರವಳಿಕೆ ತಜ್ಞ ಡಾ. ಶ್ರೀಪಾದ ಜಿ. ಮೆಹಂದಳೆ ಮತ್ತಿತರರು ಉಪಸ್ಥಿತರಿದ್ದರು.



