ರಾಜ್ಯದಲ್ಲಿ ಅಧಿಕೃತವಾಗಿ, ಅನಧಿಕೃತವಾಗಿ ನೆಲೆಸಿರುವ ಪಾಕ್ ಪ್ರಜೆಗಳ ತಪಾಸಣಾ ಕಾರ್ಯವನ್ನು ಕೇಂದ್ರ ಗುಪ್ತಚರ ವಿಭಾಗದ ಅಧಿಕಾರಿಗಳು ನಡೆಸಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರದಂತೆ ದೇಶದ ಎಲ್ಲೆಡೆ ಇರುವ ಪಾಕ್ ಪ್ರಜೆಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಇದು ರಾಷ್ಟ್ರೀಯ ಪ್ರಕರಣವಾದ ಕಾರಣ ಎಲ್ಲ ರಾಜ್ಯಗಳೂ ಸಹಕಾರ ನೀಡಲಿವೆ ಎಂದರು. ರಾಷ್ಟ್ರದ ಭದ್ರತೆ ವಿಷಯದಲ್ಲಿ ಕೇಂದ್ರ ತೆಗೆದುಕೊಂಡ ರಾಜತಾಂತ್ರಿಕ ನಿರ್ಧಾರಗಳು ಸ್ವಾಗತಾರ್ಹ. ಭಯೋತ್ಪಾದಕ ಪ್ರಕರಣಗಳು ಮರುಕಳಿಸದಂತೆ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.



