ಮಹಿಳೆಯೊಬ್ಬರು ರಸ್ತೆ ದಾಟುವಾಗ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಎಸ್ಕೇಪ್ ಆದ ಘಟನೆ ಉಡುಪಿಯ ಕಲ್ಸಂಕ ಸಮೀಪ ಸಂಭವಿಸಿದೆ.

ಅಂಬಾಗಿಲು- ಉಡುಪಿ ರಸ್ತೆಯ ಪಾಡಿಗಾರು ಎಂಬಲ್ಲಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ಸಮಯ ಈಕೆಯನ್ನು ಗಮನಿಸಿದ ರಿಕ್ಷಾ ಚಾಲಕ ವೇಗ ಕಡಿಮೆ ಮಾಡಿದ್ದಾನೆ. ಆದರೆ ರಿಕ್ಷಾವನ್ನು ಓವರ್ ಟೇಕ್ ಮಾಡಿಕೊಂಡು ಅತಿವೇಗದಿಂದ ಬಂದ ಬೈಕ್ ಮಹಿಳೆಗೆ ಡಿಕ್ಕಿ ಹೊಡೆದಿದೆ. ಆಕೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಗಾಯಾಳು ಮಹಿಳೆಯನ್ನು ಸ್ಥಳೀಯ ನಿವಾಸಿ ಲಲಿತ ಆಚಾರ್ಯ ಎಂದು ಗುರುತಿಸಲಾಗಿದೆ. ಸದ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿಟ್ ಅಂಡ್ ರನ್ ಮಾಡಿದ ದ್ವಿಚಕ್ರ ವಾಹನ ಸವಾರನಿಗಾಗಿ ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.



