ಕರಾವಳಿಯಲ್ಲಿ ಈ ಬಾರಿ ತಾಪಮಾನ ಹಿಂದೆಂದಿಗಿಂತಲೂ ಅಧಿಕವಾಗಿದೆ. ಈ ಬಿರುಬೇಸಿಗೆಯಲ್ಲಿಯೂ ಮಂಗಳೂರು ನಗರದಲ್ಲಿ ಕುಡಿಯುವ ನೀರಿಗಿಲ್ಲ ಆತಂಕ ಎಂಬುದು ನೆಮ್ಮದಿಗೆ ಕಾರಣವಾಗಿದೆ.

ಸಾಧಾರಣವಾಗಿ ಮಂಗಳೂರು ನಗರಕ್ಕೆ ಏಪ್ರಿಲ್-ಮೇ ತಿಂಗಳಲ್ಲಿ ಕುಡಿಯವ ನೀರಿಗೆ ಬರ ಉಂಟಾಗುತ್ತದೆ. ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಮ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ರೇಶನಿಂಗ್ ಮಾಡುವ ಪ್ರಮೇಯ ಉಂಟಾಗುತ್ತದೆ. ದಿನಬಿಟ್ಟು ದಿನ, ಎರಡು ದಿನಕ್ಕೊಮ್ಮೆ, ಮೂರು ದಿನಕ್ಕೊಮ್ಮೆ ನೀರು ಪೂರೈಕೆಯ ಪರಿಣಾಮ ನಗರದ ಹಲವೆಡೆ ನೀರಿನ ಸಮಸ್ಯೆ ಎದುರಾಗುತ್ತದೆ.
ಆದರೆ ಈ ಬಾರಿ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಮ್‌ನಲ್ಲಿ ನೀರು ಲಭ್ಯತೆ ಹೇರಳವಾಗಿದೆ. ಅಲ್ಲದೇ ನೇತ್ರಾವತಿ ನದಿ ತೀರದುದ್ದಕ್ಕೂ ಇರುವ ಅಣೆಕಟ್ಟು ಗಳಲ್ಲಿ ನೀರಿನ ಸಂಗ್ರಹ ಸಾಕಷ್ಟಿದೆ. ಈ ಹಿಂದೆ ತುಂಬೆ ಅಣೆಕಟ್ಟು ಒಂದೇ ಕುಡಿಯುವ ನೀರಿನ ಸಂಗ್ರಹಕ್ಕೆ ಪ್ರಧಾನವಾಗಿತ್ತು. ಆದರೆ ಈಗ ಬಿಳಿಯೂರು, ಎಎಂಆರ್, ಜಕ್ರಿಬೆಟ್ಟು ಡ್ಯಾಮ್ ಗಳಲ್ಲಿ ನೀರಿನ ಶೇಖರಣೆ ಭರ್ತಿಯಾಗಿದೆ.
ಸಾಕಷ್ಟು ಭಾಗಗಳಲ್ಲಿ ನೇತ್ರಾವತಿ ನದಿ ತೀರದ ಕೃಷಿಕರು ತಮ್ಮ ಬೆಳೆಗಳಿಗೆ ನೇತ್ರಾವತಿ ನದಿ ತೀರವನ್ನೇ ಆಶ್ರಯಿಸಿದ್ದಾರೆ. ಬೇಸಿಗೆ ಕಾಲದಲ್ಲಿ ನೀರಿನ ಅಭಾವದ ಸೂಚನೆ ಸಿಗುತ್ತಿದ್ದಂತೆಯೇ ಜಿಲ್ಲಾಡಳಿತ ಕೃಷಿಕರ ಪಂಪ್ ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿತ್ತು. ಆದರೆ ಈ ಬಾರಿ ನದಿಯಲ್ಲಿ ನೀರಿನ ಮಟ್ಟ ಬೇಕಾದಷ್ಟಿದ್ದು, ಕೃಷಿಕರೂ ನಿರಾಳರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಡ್ಯಾಂಗಳಲ್ಲಿ ಪ್ರಸ್ತುತ ಎಎಂಆರ್ ಡ್ಯಾಮ್‌ನಲ್ಲಿ 18.90 ಮೀ. ನೀರು, ತುಂಬೆ ಡ್ಯಾಮ್‌ನಲ್ಲಿ 5.70 ಮೀ. ನೀರು, ಹರೇಕಳ ಅಡ್ಯಾರ್ ಡ್ಯಾಮ್‌ನಲ್ಲಿ 1 ಮೀ. ನೀರು, ಬಿಳಿಯೂರು ಡ್ಯಾಮ್‌ನಲ್ಲಿ 4 ಮೀ. ನೀರು, ಜಕ್ರಿಬೆಟ್ಟು ಡ್ಯಾಮ್‌ನಲ್ಲಿ 3 ಮೀ. ನೀರು, ಮಳವೂರು ಡ್ಯಾಮ್‌ನಲ್ಲಿ 1.50 ಮೀ. ನೀರು, ಇರುವೈಲು ಡ್ಯಾಮ್‌ನಲ್ಲಿ 1.75 ಮೀ. ನೀರು ಲಭ್ಯವಿದೆ.



