ಕೇರಳ ರಾಜ್ಯದಲ್ಲಿ 7 ವರ್ಷದ ಬಾಲಕಿ ರೇಬಿಸ್‌ಗೆ ಬಲಿಯಾಗಿದ್ದಾಳೆ. ಇದರೊಂದಿಗೆ ಕಳೆದೊಂದು ತಿಂಗಳಲ್ಲಿ ರೇಬಿಸ್ ಪ್ರಕರಣದಲ್ಲಿ ಮಕ್ಕಳ ಸಾವಿನ ಸಂಖ್ಯೆ 3 ಕ್ಕೇರಿದಂತಾಗಿದೆ.

ಕೊಲ್ಲಂ ಜಿಲ್ಲೆಯ ಕುನ್ನಿಕೋಡ್ ನಿವಾಸಿಯಾದ 7 ವರ್ಷದ ಬಾಲಕಿ ನಿಯಾ ಫೈಸಲ್ ನಾಯಿ ಕಡಿತಕ್ಕೆ ಒಳಗಾಗಿದ್ದಳು. ಬಳಿಕ ಪೋಷಕರು ಆಸ್ಪತ್ರೆಗೆ ಕರೆದೊಯ್ದು ಲಸಿಕೆಯನ್ನೂ ಹಾಕಿಸಿದ್ದರು. ಹಾಗಿದ್ದೂ ಆಕೆಯಲ್ಲಿ ರೇಬಿಸ ಲಕ್ಷಣ ಕಂಡುಬಂದಿದೆ. ಬಳಿಕ ತಿರುವನಂತಪುರದಲ್ಲಿನ ಶ್ರೀ ಅವಿತ್ತೋಮ್ ಥಿರುನಾಲ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವು ದಿನಗಳಿಂದ ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬಾಲಕಿ ಅಸುನೀಗಿರುವುದಾಗಿ ಕುಟುಂಬದವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.



