ದಕ್ಷಿಣ ಕನ್ನಡ : ಹಿಂದೆ ಕಾರ್ಕಳದಲ್ಲಿ ಕನ್ನಡ ಸಂಘವನ್ನು ಹುಟ್ಟುಹಾಕಿ ಕನ್ನಡದ ಕಂಪನ್ನು ಪಸರಿಸಿದ, ಸಾಹಿತ್ಯದ ಕೃಷಿಕರ ನೆನಪಿನಲ್ಲಿ ಅವರ ಕುಟುಂಬಸ್ಥರು ಮತ್ತು ಸದೃದಯಿ ಬಂಧುಗಳು ಸೇರಿ ಕೊಡಮಾಡುವ, ಕಾರ್ಕಳ ಸಾಹಿತ್ಯ ಸಂಘದ ಸಂಸ್ಥಾಪಕರಾದ ‘ಪ್ರೊ. ಎಂ.ರಾಮಚಂದ್ರ ಸಂಸ್ಮರಣೆಯ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ’ಗೆ ಈ ಸಾಲಿನಲ್ಲಿ ಪ್ರಾಧ್ಯಾಪಕ, ಬರಹಗಾರ, ಚಿಂತಕ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ಪೆರ್ಲ ಸಮೀಪದ ಪಡ್ರೆ ಗ್ರಾಮದ ರಾಮ್ ಭಟ್ ಸಜಂಗದ್ದೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಪ್ರಸ್ತುತ ಬಾರಕೂರಿನಲ್ಲಿ ನೆಲೆಸಿರುವ ರಾಮ್ ಭಟ್ ಅವರು ಬಾರಕೂರಿನ ನ್ಯಾಷನಲ್ ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಶಂಕರನಾರಾಯಣದ ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ಅತಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಎಳೆಯ ಮಕ್ಕಳಿಗೆ ತಲುಪಿಸಬೇಕು ಎನ್ನುವ ಆಶಯದೊಂದಿಗೆ ಸಾಹಿತ್ಯ ಕಮ್ಮಟ ಹಾಗೂ ಕಾರ್ಯಾಗಾರಗಳನ್ನು ನಡೆಸಿದ್ದರು. ಸಾಹಿತ್ಯಿಕವಾಗಿ ವಿದ್ಯಾರ್ಥಿಗಳನ್ನು ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ತಮ್ಮ ವೃತ್ತಿ ಜೀವನದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಿದ ಹಿರಿಮೆ ರಾಮಭಟ್ಟರದ್ದು . ಇವರಿಂದ ಪ್ರೇರಣೆ ಪಡೆದ ಅನೇಕ ಎಳೆಯ ಪ್ರತಿಭೆಗಳು ಇಂದು ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.
ಉತ್ತಮ ಲೇಖಕರಾಗಿರುವ ಇವರು ‘ನಾಡಿಗೆ ನಮಸ್ಕಾರಕ್ಕೆ ನೂರು ನಮಸ್ಕಾರ’, ‘ಅಜಪುರದ ಅಗ್ರಗಣ್ಯರು’, ‘ಹಾಲು ಜೇನು’, ‘ಭಾರತದ ಆರ್ಥಿಕ ಚರಿತ್ರೆ’, ‘ಹೂಡಿಕೆ ನಿಮ್ಮಲ್ಲೇ ಮಾಡಿಕೊಳ್ಳಿ’ ಮುಂತಾದ ಕೃತಿಗಳನ್ನು ರಚಿಸಿದ್ದು ಪ್ರಸ್ತುತರು ಉತ್ತಮ ಸಂಘಟಕರು, ಲೇಖಕರು, ಭಾಷಾಂತರಕಾರರಾದ ಇವರನ್ನು ಆಳ್ವಾಸ್ ನುಡಿಸಿರಿಯ ಅಂಗವಾಗಿ ನೆಡೆದ ‘ವಿದ್ಯಾರ್ಥಿ ಸಿರಿ’ ಸಮ್ಮೇಳನದಲ್ಲಿ ಮತ್ತು ಮಕ್ಕಳ ಸಾಹಿತ್ಯ ಸಂಗಮದಿಂದ ಕಟೀಲಿನಲ್ಲಿ ನಡೆದ ‘ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿತ್ತು.
ಶಾರದಾ ರಾಮಚಂದ್ರ ಮತ್ತು ಮಕ್ಕಳ ಪ್ರಾಯೋಜಕತ್ವದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 20.07.2023ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ನ ಸಂಭ್ರಮ ಸಭಾಂಗಣದಲ್ಲಿ ನಡೆಯಲಿದೆ. ರಮೇಶ್ ಕಾರ್ಣಿಕ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲ್ಲಿ ವಿಶ್ರಾಂತ ಕುಲಪತಿಗಳಾದ ಡಾ.ಕೆ.ಚಿನ್ನಪ್ಪ ಗೌಡರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.



