ಪಹಲ್ಗಾಮ್‌ನಲ್ಲಿ 26 ಅಮಾಯಕ ಜೀವಗಳನ್ನು ಬಲಿ ಪಡೆದಿದ್ದ ಪಾಕಿಸ್ತಾನ ಬೆಂಬಲಿತ ಉಗ್ರರಿಗೆ ಭಾರತ ಸರಿಯಾದ ತಿರುಗೇಟು ನೀಡುತ್ತಿದ್ದು, ಪಾಕಿಸ್ತಾನದಲ್ಲಿ ನೆಲೆ ನಿಂತಿರುವ ಉಗ್ರರ ಅಡಗು ತಾಣಗಳನ್ನು ಭಾರತೀಯ ಸೇನೆ ಹೊಡೆಯಲಾರಂಭಿಸಿದೆ. ಪಾಕಿಸ್ತಾನ ಸೂಪರ್ ಲೀಗ್‌ನ 27 ನೇ ಪಂದ್ಯವು ಮೇ 8 ರಂದು ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಕರಾಚಿ ಕಿಂಗ್ಸ್ ಮತ್ತು ಬಾಬರ್ ಅಜಮ್ ನೇತೃತ್ವದ ಪೇಶಾವರ್ ಝಲ್ಮಿ ನಡುವೆ ನಡೆಯಬೇಕಿತ್ತು. ಆದರೆ ಯುದ್ಧದ ಕಾರ್ಮೋಡ ಹರಡಿದ್ದು, ಸುರಕ್ಷತೆ ದೃಷ್ಟಿಯಿಂದ ಪಂದ್ಯ ರದ್ದುಗೊಳಿಸಲಾಗಿದೆ.

ಭಾರತದ ದಾಳಿಗೆ ಪ್ರತಿದಾಳಿ ನಡೆಸಲು ಯತ್ನಿಸಿರುವ ಪಾಕಿಸ್ತಾನದ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಭಾರತದ ನಾಗರೀಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ಮಾಡಿರುವುದರಿಂದ ಕೆರಳಿ ಕೆಂಡವಾಗಿರುವ ಭಾರತ, ಪಾಕಿಸ್ತಾನದ ಪ್ರಮುಖ ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ರಾವಲ್ಪಿಂಡಿಯಲ್ಲಿರುವ ಕ್ರಿಕೆಟ್ ಕ್ರೀಡಾಂಗಣವು ಹಾನಿಗೊಳಗಾಗಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.
ಈ ದಾಳಿಯಲ್ಲಿ ಕ್ರೀಡಾಂಗಣದ ಬಳಿಯಿರುವ ರೆಸ್ಟೋರೆಂಟ್ ಕೂಡ ಹಾನಿಗೊಳಗಾಗಿದೆ. ಪಾಕಿಸ್ತಾನ ಮಾಧ್ಯಮಗಳ ಪ್ರಕಾರ, ಸಂಬಂಧಪಟ್ಟ ಅಧಿಕಾರಿಗಳು ಆ ಪ್ರದೇಶವನ್ನು ಸೀಲ್ ಮಾಡಿದ್ದು, ಡ್ರೋನ್ ಎಲ್ಲಿಂದ ಬಂತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ದಾಳಿಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿರುವ ವರದಿಗಳಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.



