ಆಪರೇಷನ್ ಸಿಂಧೂರ.. ಈ ಹೆಸರು ಭಾರತೀಯರಿಗೆ ದೇಶಪ್ರೇಮದ ಸಂಕೇತವಾಗಿದೆ. ಪಹಲ್ಗಾಮ್‌ನಲ್ಲಿ ಸಿಂಧೂರ ಅಳಿಸಿದ ಉಗ್ರರ ರಕ್ತದ ತಿಲಕವಿಟ್ಟು ಭಾರತೀಯ ಸೇನೆ ಪ್ರತೀಕಾರವನ್ನು ತೀರಿಸಿಕೊಂಡಿದೆ. ಪಾಕ್ ಉಗ್ರರ ಮೇಲೆ ಆಪರೇಷನ್ ಸಿಂಧೂರ ಆರಂಭವಾದ ಘಳಿಗೆಯಲ್ಲಿ ಹುಟ್ಟಿದ ಮಗುವಿಗೆ ಬಿಹಾರದಲ್ಲಿ ಸಿಂಧೂರಿ ಅನ್ನೋ ಹೆಸರಿಟ್ಟು ನಾಮಕರಣ ಮಾಡಲಾಗಿದೆ.

ಮೇ 7ರಂದು ಬಿಹಾರದ ಕತಿಹಾರ್ ಜಿಲ್ಲೆಯ ಆಸ್ಪತ್ರೆಯಲ್ಲಿ ಈ ಮಗು ಜನಿಸಿದ್ದು. ಅಪ್ಪಟ ದೇಶಭಕ್ತ ಕುಂದನ್ ಕುಮಾರ್ ತನ್ನ ಮಗಳಿಗೆ ಸಿಂಧೂರಿ ಅನ್ನೋ ಹೆಸರಿಟ್ಟು ನಾಮಕರಣ ಮಾಡಲಾಗಿದೆ. ನಮಗೆ ಭಾರತೀಯ ಸೇನೆಯ ಬಗ್ಗೆ ಅಪಾರ ಗೌರವ ಇದೆ. ಯೋಧರು ಅಮಾಯಕರನ್ನು ಸಾಯಿಸಿದ ಉಗ್ರರ ಮೇಲೆ ಕಠಿಣ ಕ್ರಮ ಕೈಗೊಂಡಿದ್ದಾರೆ. ಹೀಗಾಗಿ ತಮ್ಮ ಮಗಳಿಗೆ ಸಿಂಧೂರಿ ಅನ್ನೋ ಹೆಸರಿಟ್ಟು ಅವಳು ದೊಡ್ಡವಳಾದ ಮೇಲೆ ಇದರ ಅರ್ಥವನ್ನು ತಿಳಿಸುತ್ತೇವೆ ಎಂದಿದ್ದಾರೆ. ಬಿಹಾರದಲ್ಲಿ ಸಿಂಧೂರಿ ಅನ್ನೋ ಈ ಮಗು ಪಿಳಿಪಿಳಿ ಅಂತ ಕಣ್ಣು ಬಿಡುತ್ತಿದ್ದು, ಬಿಹಾರದ ಆಸ್ಪತ್ರೆಯಲ್ಲಿ ಜನಿಸಿದ ಒಟ್ಟು 12 ಮಕ್ಕಳಿಗೂ ಹೆತ್ತವರು ಇದೇ ಹೆಸರನ್ನು ನಾಮಕರಣ ಮಾಡುತ್ತಿದ್ದಾರೆ. ಗಂಡು ಮಕ್ಕಳಿಗೆ ಸಿಂಧೂರ್ ಎಂದು ಹೆಣ್ಣು ಮಗು ಜನಿಸಿದರೆ ಸಿಂಧೂರಿ ಎಂದು ಕರೆಯುತ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ, ವೈದ್ಯರಿಂದಲೂ ಪೋಷಕರ ಈ ಕಾರ್ಯಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಹಲ್ಗಾಮ್ ಪ್ರತೀಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಪರೇಷನ್ ಸಿಂಧೂರ ಅನ್ನೋ ಹೆಸರಿಟ್ಟಿದ್ದರು. ಉಗ್ರರಿಂದ ಗಂಡನನ್ನು ಕಳೆದುಕೊಂಡ ವಿಧವೆಯರಿಗೆ ನ್ಯಾಯ ಕೊಡಿಸಿದ ಈ ಸಿಂಧೂರ ಭಾರತೀಯರ ದೇಶಾಭಿಮಾನದ ಭಾವನೆಯೊಂದಿಗೆ ಬೆಸೆದುಕೊಳ್ಳುವಂತಾಗಿದೆ. ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆ ಸಮರ ಸಾರಿರುವಾಗ ಬಿಹಾರದ ಪೋಷಕರು ಹುಟ್ಟಿದ ಗಂಡು ಮಗುವಿಗೆ ಸಿಂಧೂರ್ ಹಾಗೂ ಹೆಣ್ಣು ಮಗುವಿಗೆ ಸಿಂಧೂರಿ ಎಂದು ನಾಮಕರಣ ಮಾಡಿ ತಮ್ಮ ದೇಶಪ್ರೇಮ ಮೆರೆಯುತ್ತಿದ್ದಾರೆ. ತಮ್ಮ ಮಕ್ಕಳಿಗೆ ಸಿಂಧೂರ ಅನ್ನೋ ಹೆಸರಿಡೋ ಮೂಲಕ ಭಾರತೀಯ ಸೇನೆಗೆ ಗೌರವ ಸಲ್ಲಿಸುತ್ತಿದ್ದಾರೆ.



