‘ಕೊಲೆಗಳು ಆಗುತ್ತಲೇ ಇರುತ್ತವೆ. ಕೊಲೆಯಾದ ಪ್ರತಿಯೊಬ್ಬರ ಮನೆಗೆ ಸಚಿವರು ಹೋಗಲೇಬೇಕು ಎಂದೇನೂ ಇಲ್ಲ. ಕೊಲೆ ಏಕೆ ಆಗಿದೆ ಎಂಬುದೂ ಮುಖ್ಯವಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮಂಗಳೂರಿನಲ್ಲಿ ಇಂದು (ಶನಿವಾರ)ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಬಜಪೆ ಬಳಿ ಈಚೆಗೆ ಹತ್ಯೆಗೀಡಾದ ಹಿಂದುತ್ವ ಪರ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಮನೆಗೆ ಸಚಿವರು ಭೇಟಿ ನೀಡಿಲ್ಲ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದರು.
ಪೊಲೀಸರು ಅಪರಾಧಿಗಳನ್ನು ಈಗಾಗಲೇ ಪತ್ತೆ ಹಚ್ಚಿದ್ದಾರೆ. ಮುಂದೆ ಎನ್ಐಎ ತನಿಖೆಗೆ ಇದನ್ನು ನೀಡಬೇಕೋ? ಬೇಡವೋ? ಎನ್ನುವ ತೀರ್ಮಾನವನ್ನು ಗೃಹ ಇಲಾಖೆ ತೆಗೆದುಕೊಳ್ಳಲಿದೆ. ಸರಕಾರದಿಂದ ಈಗಾಗಲೇ ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಉಳಿದ ಅಪರಾಧಿಗಳ ಪತ್ತೆ ಕಾರ್ಯವು ನಡೆಯುತ್ತಲೇ ಇದೆ. ವಿರೋಧಿಗಳ ಊಹಾಪೂಹಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮೂಲವನ್ನು ಭೇದಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಸರಕಾರ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದೆ. ಯಾರಿಗೂ ಕೂಡ ರಕ್ಷಣೆಯನ್ನು ನೀಡುವ ಕೆಲಸವನ್ನು ಸರಕಾರ ಮಾಡುತ್ತಾ ಇಲ್ಲ. ದಿಟ್ಟ ಕ್ರಮದಿಂದ ಅಪರಾಧಿಗಳ ಪತ್ತೆಯಾಗಿದೆ. ಯಾವ ಪುರಾವೆಗಳು ಇಲ್ಲದೆ ಮಾತನಾಡುವವರ ಕುರಿತು ಚಿಂತಿಸುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಹತ್ಯೆ ನಡೆದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುತ್ತಿದ್ದಾರೆ. ಕೆಲವೊಬ್ಬರು ನಕಲಿ ಹೆಸರಲ್ಲಿ ಖಾತೆ ಬಳಸುತ್ತಿದ್ದು, ಅವರು ಯಾರು ಎಂಬುದು ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಸಂಬಂಧಿಸಿದ ಸಂಸ್ಥೆಗಳಿಗೆ ಪತ್ರ ಬರೆದು ಮಾಹಿತಿ ತಿಳಿದುಕೊಂಡು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಈ ಕ್ಷಣ ಮಾತನಾಡಿದರು.



