ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣದ ಎಲ್ಲಾ ಒಂಬತ್ತು ಅಪರಾಧಿಗಳಿಗೆ ಕೊಯಮತ್ತೂರಿನ ಮಹಿಳಾ ನ್ಯಾಯಾಲಯವು ಮಂಗಳವಾರ ರಂದು ಜೀವಾವಧಿ ಶಿಕ್ಷೆ ನೀಡಿ ಆದೇಶಿಸಿದೆ.

ಆರು ವರ್ಷಗಳ ಹಿಂದೆ ತಮಿಳುನಾಡನ್ನು ಬೆಚ್ಚಿಬೀಳಿಸಿದ್ದ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶೆ ಆರ್. ನಂದಿನಿ ದೇವಿ ಅವರು ಇಂದು ಈ ಮಹತ್ವದ ತೀರ್ಪು ನೀಡಿದ್ದಾರೆ.ಸಂತ್ರಸ್ತ ಮಹಿಳೆಯರಿಗೆ ಒಟ್ಟಾರೆ 85 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಅಪರಾಧಿಗಳಾದ ಕೆ. ತಿರುನಾವುಕ್ಕರಸು(34), ಎನ್. ರಿಶ್ವಂತ್, ಅಲಿಯಾಸ್ ಶಬರಿರಾಜನ್(32), ಎಂ. ಸತೀಶ್ (33), ಟಿ. ವಸಂತ ಕುಮಾರ್ (30), ಆರ್. ಮಣಿವಣ್ಣನ್ (32), ಹರೋನ್ ಪಾಲ್ (32), ಪಿ. ಬಾಬು, ಅಲಿಯಾಸ್ ಬೈಕ್ ಬಾಬು (33), ಕೆ. ಅರುಳಾನಂದಂ (39), ಮತ್ತು ಎಂ. ಅರುಣ್‌ಕುಮಾರ್ ಗೆ ಸಾಯುವವರೆಗೆ ಜೈಲು ಶಿಕ್ಷೆ ನೀಡಲಾಗಿದೆ.
2016 ಮತ್ತು 2018 ರ ನಡುವೆ ನಡೆದ ಬ್ಲ್ಯಾಕ್‌ಮೇಲ್ ಸೇರಿದಂತೆ ಹಲವಾರು ಘಟನೆಗಳಲ್ಲಿ ಆರೋಪಗಳನ್ನು ಎದುರಿಸುತ್ತಿರುವ ಈ ಅಪರಾಧಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ಲೈಂಗಿಕ ಕಿರುಕುಳ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಮತ್ತು ಸುಲಿಗೆ ಆರೋಪ ಹೊರಿಸಲಾಗಿದೆ.
ಸಿಬಿಐ ಪರವಾಗಿ ಹಾಜರಾದ ವಿಶೇಷ ಸರ್ಕಾರಿ ಅಭಿಯೋಜಕ ವಿ. ಸುರೇಂದ್ರ ಮೋಹನ್, ಆರೋಪಿಗಳ ವಯಸ್ಸು ಮತ್ತು ಕೌಟುಂಬಿಕ ಹಿನ್ನೆಲೆಯನ್ನು ಉಲ್ಲೇಖಿಸಿ ಶಿಕ್ಷೆ ಕಡಿಮೆ ಮಾಡುವಂತೆ ಪ್ರತಿವಾದಿಗಳ ಪರ ವಕೀಲರು ಕೋರಿದ್ದಾರೆ ಎಂದು ಹೇಳಿದರು.
ಪ್ರಾಸಿಕ್ಯೂಷನ್ ಮತ್ತು ಡಿಫೆನ್ಸ್ ವಾದಗಳು ಪೂರ್ಣಗೊಂಡ ನಂತರ, ನ್ಯಾಯಾಲಯವು ಇಂದು ಪ್ರಕರಣದ ಎಲ್ಲಾ ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ಪ್ರಕಟಿಸಿತ್ತು. ಮಧ್ಯಾಹ್ನ ಶಿಕ್ಷೆ ಪ್ರಕಟಿಸಿದೆ.



