ಅಮೃತ್ ಭಾರತ್ ನಿಲ್ದಾಣ ಯೋಜನೆ ಅಡಿಯಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಅಭಿವೃದ್ಧಿ ಕಾರ್ಯಗಳು ಅಂತಿಮ ಹಂತಕ್ಕೆ ತಲುಪಿದ್ದು, ಇದೀಗ ನಿಲ್ದಾಣಕ್ಕೆ ಹೊಸ ರೂಪ ಸಿಕ್ಕಿದೆ. ಶೀಘ್ರದಲ್ಲೇ ಉದ್ಘಾಟನೆಯಾಗುವ ನಿರೀಕ್ಷೆಯಿದೆ.

ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದ 16 ರೈಲು ನಿಲ್ದಾಣಗಳಲ್ಲಿ ಒಂದಾಗಿದ್ದು, 2023 ಆಗಸ್ಟ್ನಲ್ಲಿ ಎಬಿಬಿಎಸ್ ಅಡಿಯಲ್ಲಿ ಅಭಿವೃದ್ಧಿ ಕಾರ್ಯಕೈಗೊಳ್ಳಲು ಶಿಲಾನ್ಯಾಸ ನೆರವೇರಿಸಲಾಗಿತ್ತು. ಕಾಮಗಾರಿಗೆ ರೈಲ್ವೇ ಸಚಿವಾಲಯ 19.32 ರೂ. ಮೀಸಲಿಟ್ಟಿದೆ. ಅದರಂತೆ ನಿಲ್ದಾಣದ ಉನ್ನತೀಕರಣ ಕಾರ್ಯಗಳು ನಡೆಯುತ್ತಿವೆ. ನಿಲ್ದಾಣದ ಕಟ್ಟಡ ಹೊಸ ರೂಪದಲ್ಲಿ ಕಂಗೊಳಿಸುತ್ತಿದೆ. ಸದ್ಯಕಟ್ಟಡಕ್ಕೆ ಬಣ್ಣ ಬಳಿಯುವ ಕೆಲಸಗಳು ನಡೆಯುತ್ತಿವೆ. ಕರಾವಳಿಯ ಪಾರಂಪರಿಕ ಶೈಲಿ ನಿಲ್ದಾಣದ ಮುಂಭಾಗವನ್ನು ಕರಾವಳಿಯ ಪಾರಂಪರಿಕ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಮಂಗಳೂರು ಹಂಚಿನ ಛಾವಣಿ ವಿಶೇಷವಾಗಿ ಆಕರ್ಷಿಸುತ್ತಿದೆ. ಹಳೆಯ ಹೆಚ್ಚಿನ ಮನೆಗಳಲ್ಲಿ ಇರುವಂತೆ ನಿಲ್ದಾಣದ ಮುಂಭಾಗದಲ್ಲಿ ಪ್ರವೇಶ ದ್ವಾರವೂ ನಿರ್ಮಾಣವಾಗಿದ್ದು, ಇದು ನಿಲ್ದಾಣ ಸೊಬಗನ್ನು ಹೆಚ್ಚಿಸಿದೆ. ನಿಲ್ದಾಣಕ್ಕೆ ಬರುವ ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ನಿಲ್ದಾಣದ ಪ್ರವೇಶ ದ್ವಾರದ ಮುಂಭಾಗದ ಸುಮಾರು 7,000 ಚ.ಮೀ. ಪ್ರದೇಶವನ್ನು ಕಾಂಕ್ರೀಟ್ ಅಳವಡಿಸಿ ಸುಂದರಗೊಳಿಸಲಾಗಿದೆ. ಜತೆಗೆ ಗಾರ್ಡನ್, ಲಾನ್ ಬೆಳೆಸಲು ಅನುಕೂಲವಾಗುವಂತೆ ಐಲ್ಯಾಂಡ್‌ಗಳನ್ನೂ ನಿರ್ಮಿಸಲಾಗಿದ್ದು, ಇಲ್ಲಿ ಗಿಡಗಳನ್ನು ನೆಟ್ಟ ಬಳಿಕ ನಿಲ್ದಾಣ ಇನ್ನಷ್ಟು ಸುಂದರಗೊಳ್ಳಲಿದೆ.

1632 ಚ.ಮೀ. ವಿಸ್ತೀರ್ಣವಾದ ಪ್ರದೇಶದಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳ ಪಾರ್ಕಿಂಗ್ ವ್ಯವಸ್ಥೆ ಇದೆ. ನಿಲ್ದಾಣಕ್ಕೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ನಾಗುರಿ ಭಾಗದಿಂದ ಇರುವ ರಸ್ತೆಯನ್ನು ಅಗಲಗೊಳಿಸಿ ಅಭಿವೃದ್ಧಿ ಪಡಿಸುವ ಕಾಮಗಾರಿಗೂ ಚಾಲನೆ ಸಿಕ್ಕಿದ್ದು, ಪಾಲಿಕೆಯಿಂದ ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ನಿಲ್ದಾಣದ ಒಳಭಾಗದಲ್ಲಿ ಹವಾನಿಯಂತ್ರಿತ ವೇಟಿಂಗ್ ಹಾಲ್ ಮತ್ತು ಅಂಗವಿಕಲರಿ ಗಾಗಿ ವಿಶ್ರಾಂತಿ ಕೊಠಡಿ ನಿರ್ಮಾಣವಾಗಿದೆ. 6 ಮೀ. ಅಗಲದ ಪಾದಚಾರಿ ಮೇಲೇ ತುವೆ ನಿರ್ಮಾಣ ಮಾಡಲಾಗಿದೆ. ಜತೆಗೆ ಫ್ಲಾಟ್ ಫಾರ್ಮ್ 1 ಮತ್ತು 2ನ್ನು ದುರಸ್ತಿ ಗೊಳಿಸಲಾಗಿದೆ. ಫ್ಲಾಟ್ ಫಾರ್ಮ್ ನಲ್ಲಿ ಹೈಮಾಸ್ಟ್ ದೀಪಗಳು, ಬಿಎಲ್ ಡಿಸಿ ಫ್ಯಾನ್, ಮೊಬೈಲ್ ಫೋನ್ ಚಾರ್ಜಿಂಗ್ ವ್ಯವಸ್ಥೆ ಮೊದಲಾದ ಪ್ರಯಾಣಿಕರಿಗೆ ಅಗತ್ಯವಿರುವ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ.



