ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಕಡೆಗಳಲ್ಲಿ ಸರಕಾರಿ ಜಿಮ್ ಸೆಂಟರನ್ನು ಆರಂಭಿಸುವಂತೆ ಶಾಸಕರಾದ ಅಶೋಕ್ ರೈ ಈ ಹಿಂದೆ ಕ್ರೀಡಾ ಸಚಿವರಿಗೆ ಮನವಿ ಮಾಡಿದ್ದು, ಬುಧವಾರ ಕ್ರೀಡಾ ಇಲಾಖೆ ಕಮಿಷನರ್ ಮತ್ತು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸರಕಾರದ ಕಾರ್ಯದರ್ಶಿ ಜೊತೆ ಸಭೆ ನಡೆಸಿದ್ದು ಶೀಘ್ರವೇ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಜಿಮ್ ಕೇಂದ್ರ ಪ್ರಾರಂಭ ಮಾಡುವಂತೆ ಈ ಹಿಂದೆಯೇ ಶಾಸಕರಿಗೆ ಹಲವಾರು ಮನವಿಗಳು ಬಂದಿದ್ದವು. ಯುವಕರು, ಯುವ ಸಂಘಟನೆಗಳಿಂದ ಶಾಸಕರಿಗೆ ಮನವಿ ಬಂದಿದ್ದು ಜಿಮ್ ಕೇಂದ್ರ ಪ್ರಾರಂಭ ಮಾಡುವಂತೆ ಮನವಿ ಮಾಡಿದ್ದರು. ಈ ವಿಚಾರವನ್ನು ಕಳೆದ ಕೆಲವು ತಿಂಗಳ ಹಿಂದೆ ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವರ ಜೊತೆ ಮಾತುಕತೆ ನಡೆಸಿದ ವೇಳೆ ಸಚಿವರು ಅಸ್ತು ಎಂದಿದ್ದರು. ಕ್ರೀಡಾ ಇಲಾಖೆಯ ಮೂಲಕ ಜಿಮ್ ಕೇಂದ್ರ ತೆರೆಯಲು ಅವಕಾಶವಿರುವ ಬಗ್ಗೆ ಶಾಸಕರು ಸಚಿವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಶಾಸಕರು ಮೂರು ಜಿಮ್ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಪ್ರಸ್ತಾವನೆ ಸಚಿವಾಲಯದಿಂದ ಕಮಿಷನರ್ ಅವರಿಗೆ ಬಂದಿದ್ದು ಈ ಬಗ್ಗೆ ಶಾಸಕರು ಕಮಿಷನರ್ ಜೊತೆ ಸಭೆ ನಡೆಸಿ ಬೇಡಿಕೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿದ್ದಾರೆ.



