ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲು ಪ್ರಯಾಣಿಕರಿಗೆ ಗಮನಾರ್ಹ ಬದಲಾವಣೆಯಾಗಿದೆ. 5 ತಿಂಗಳು ರೈಲುಗಳ ಸಂಚಾರ ಸಂಪೂರ್ಣ ರದ್ದಾಗಲಿದೆ. ಈ ಬಗ್ಗೆ ವರದಿ ಇಲ್ಲಿದೆ.

ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಮಾರ್ಗದಲ್ಲಿ ಸುರಕ್ಷತೆ ಮತ್ತು ವಿದ್ಯುದ್ದೀಕರಣ ಕಾಮಗಾರಿ ನಡೆಯಲಿರುವ ಕಾರಣ, ಜೂನ್ 1 ರಿಂದ ನವೆಂಬರ್ 1, 2025ರವರೆಗೆ ಬೆಂಗಳೂರು-ಮಂಗಳೂರು ಮತ್ತು ಬೆಂಗಳೂರು-ಕಾರವಾರ ನಡುವಿನ ಆರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ನೈರುತ್ಯ ರೈಲ್ವೆ ಇಲಾಖೆಯು ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಯಾಣಿಕರು ಸಹಕರಿಸಬೇಕೆಂದು ಕೋರಿದೆ. ಸಕಲೇಶಪುರ – ಸುಬ್ರಹ್ಮಣ್ಯ ರೋಡ್ ಮಾರ್ಗದಲ್ಲಿ ಜೂನ್ 1 ರಿಂದ ನವೆಂಬರ್ 1ರವರೆಗೆ ಸುರಕ್ಷತೆ ಮತ್ತು ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ನಡೆಯಲಿದೆ. ಈ ಕಾರಣದಿಂದಾಗಿ ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು – ಬೆಂಗಳೂರು ಮಾರ್ಗದಲ್ಲಿ ರದ್ದಾಗುವ ರೈಲುಗಳು
ಮೇ 31 ರಿಂದ ನವೆಂಬರ್ 1 ರವರೆಗೆ ಶನಿವಾರಗಳಂದು ಸಂಚರಿಸುವ ಯಶವಂತಪುರ – ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16539) ರದ್ದು.
ಜೂನ್ 1 ರಿಂದ ನವೆಂಬರ್ 2 ರವರೆಗೆ ಭಾನುವಾರಗಳಂದು ಸಂಚರಿಸುವ ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16540) ರದ್ದು.
ಜೂನ್ 1 ರಿಂದ ಅಕ್ಟೋಬರ್ 30 ರವರೆಗೆ ಮಂಗಳವಾರ, ಗುರುವಾರ ಮತ್ತು ಭಾನುವಾರಗಳಂದು ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16575) ರದ್ದು.
ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಸಂಚರಿಸುವ ಮಂಗಳೂರು-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16576) ರದ್ದು.
ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಸಂಚರಿಸುವ ಯಶವಂತಪುರ-ಕಾರವಾರ ಟ್ರೈ-ವೀಕ್ಲಿ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16515) ರದ್ದು.
ಜೂನ್ 3 ರಿಂದ ನವೆಂಬರ್ 1 ರವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರಗಳಂದು ಸಂಚರಿಸುವ ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16516) ರೈಲು ರದ್ದು.

ಗೊಮ್ಮಟೇಶ್ವರ ಎಕ್ಸ್‍ಪ್ರೆಸ್, ಕಾರವಾರ ಎಕ್ಸ್‍ಪ್ರೆಸ್, ಮಂಗಳೂರು ಸೆಂಟ್ರಲ್ ವಾರದ ವಿಶೇಷ ಎಕ್ಸ್‍ಪ್ರೆಸ್ ಮುಂದಿನ 5ತಿಂಗಳು ರದ್ದಾಗಲಿವೆ. ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ಸಂಚಾರ ನಡೆಸುವ 12 ರೈಲುಗಳ ಪೈಕಿ 6 ರೈಲುಗಳು ಸಂಪೂರ್ಣ ರದ್ದಾಗುತ್ತಿವೆ. ಈ ಮೂಲಕ ಪ್ರಯಾಣಿಕರು ಬದಲಿ ಮಾರ್ಗ ಆಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ.



