ದಕ್ಷಿಣ ಕನ್ನಡ: ಉತ್ತರ ಭಾರತಕ್ಕೆ ತೆರಳಿ ಪ್ರವಾಹದಲ್ಲಿ ಸಿಲುಕಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಕೇರಳ ಮತ್ತು ತಮಿಳುನಾಡಿನ ಒಂದು ಅಥವಾ ಇಬ್ಬರು ಸೇರಿದಂತೆ ಜಿಲ್ಲೆಯ ಸುಮಾರು 92 ಯಾತ್ರಾರ್ಥಿಗಳು ಪವಿತ್ರ ಸ್ಥಳಗಳ ದರ್ಶನಕ್ಕಾಗಿ ಉತ್ತರ ಭಾರತಕ್ಕೆ ಪ್ರವಾಸ ಕೈಗೊಂಡಿದ್ದರು. ಜುಲೈ 19 ರಂದು ಗುಜರಾತ್‌ನ ಶ್ರೀ ಸೋಮನಾಥ ದೇವಸ್ಥಾನದ ದರ್ಶನಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳು ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಗುಜರಾತಿನಲ್ಲಿ ಕಳೆದ 15 ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದ್ದು, ವೆರಾವಲ್ ಪ್ರದೇಶದಲ್ಲಿ ಹಠಾತ್ ಪ್ರವಾಹ ಉಂಟಾಗಿ ರಸ್ತೆಗಳು ಜಲಾವೃತವಾಗಿವೆ. ಸೋಮನಾಥ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಪ್ರವಾಹದ ನೀರಿನಲ್ಲಿ ಎಲ್ಲರೂ ಸಿಕ್ಕಿ ಹಾಕಿಕೊಂಡಿದ್ದಾರೆ. ಬಳಿಕ ಸ್ಥಳೀಯ ಜಿಲ್ಲಾಡಳಿತ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಬೆಳಗ್ಗೆ 10 ಗಂಟೆಗೆ ವೆರಾವಲ್ ನಿಲ್ದಾಣದಿಂದ ಮತ್ತೊಂದು ಕ್ಷೇತ್ರಕ್ಕೆ ದರ್ಶನ ಪಡೆದು ರೈಲಿಗೆ ತೆರಳಬೇಕಿತ್ತು. ಆದರೆ, ರೈಲು ಹಳಿಗಳು ಜಲಾವೃತಗೊಂಡಿರುವುದರಿಂದ ರಾತ್ರಿಯೇ ರೈಲು ಹೊರಡಲಿದೆ. ಹೀಗಾಗಿ ಜಿಲ್ಲೆಯ ಜನರು ಸುರಕ್ಷಿತವಾಗಿ ರೈಲು ನಿಲ್ದಾಣದಲ್ಲಿ ತಂಗಿದ್ದಾರೆ ಎಂದು ಯಾತ್ರಾರ್ಥಿಗಳು ತಿಳಿಸಿದ್ದಾರೆ.



