ಮಳೆಗಾಲ ಆರಂಭಕ್ಕೂ ಮುನ್ನ ಇದೀಗ ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಜಡಿಮಳೆಗೆ ಬಂಟ್ವಾಳ ತಾಲೂಕಿನ ಅನೇಕ ಕಡೆಗಳಲ್ಲಿ ಪಾಕೃತಿಕ ವಿಕೋಪಗಳು ಉಂಟಾಗಿದೆ.

ಆದರೆ ನೇತ್ರಾವತಿ ನದಿಯಲ್ಲಿ ಹರಿಯುವ ನೀರಿನ ಮಟ್ಟದಲ್ಲಿ ಯಾವುದೇ ವ್ಯತ್ಯಾಸಗಳು ಕಂಡು ಬರದೆ ಯಥಾಸ್ಥಿತಿಯಲ್ಲಿ ಶಾಂತವಾಗಿಹರಿಯುತ್ತಿದೆ ಎಂದು ತಾಲೂಕು ಆಡಳಿತ ಅಧಿಕೃತ ಮಾಹಿತಿ ನೀಡಿದೆ. ನೇತ್ರಾವತಿ ನದಿಯಲ್ಲಿ ತಿಳಿ ನೀರು ಹರಿಯುತ್ತಿದೆ. ಘಟ್ಟ ಪ್ರದೇಶಗಳಲ್ಲಿ ಅತಿಯಾದ ಗಾಳಿ ಮಳೆಯಾದರೆ ನೇತ್ರಾವತಿ ನೀರಿನ ಮಟ್ಟ ಹೆಚ್ಚಾಗುತ್ತದೆ. ಮತ್ತು ಕೆಸರು ಮಿಶ್ರಿತ ನೀರು ತುಂಬಿ ಹರಿಯುತ್ತದೆ.

ಆದರೆ ನೇತ್ರಾವತಿ ನದಿಯಲ್ಲಿ ಮಳೆ ನೀರು, ಕಡಲ ಒಡಲು ಸೇರುವ ಮುನ್ನ ವಾಣಿಜ್ಯ ಮತ್ತು ಕುಡಿಯುವ ನೀರಿನ ಉದ್ದೇಶದಿಂದ ಅಲ್ಲಲ್ಲಿ ಅಡ್ಡಲಾಗಿ ಕಟ್ಟಲಾದ ಡ್ಯಾಂ ಗಳ ಹೊಟ್ಟೆ ತುಂಬಬೇಕು. ಅ ಬಳಿಕವಷ್ಟೇ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬರುತ್ತದೆ. ಹಾಗಾಗಿ ಆರಂಭದ ಮಳೆಯ ಕೆಸರು ನೀರು ಹೆಚ್ಚು ಎಂದರೆ ಬಂಟ್ವಾಳ ತಾಲೂಕಿನ ಶಂಭೂರು ಡ್ಯಾಂ ವರೆಗೆ ಬರಬಹುದು, ಅಲ್ಲಿಂದ ಕೆಳಗೆ ಉಕ್ಕಿ ಹರಿಯಬೇಕಾದರೆ ಇನ್ನೂ ಕೆಲದಿನಗಳು ಬೇಕಾಗಬಹುದು ಎಂಬುದು ವಾಸ್ತವ ಸತ್ಯವಾಗಿದೆ.



